ಬೆಂಗಳೂರು: ರಾಜ್ಯದಲ್ಲಿ ಇಂದು ವಿಧಾನಸಭೆಗೆ ಚುನಾವಣೆ ಭರದಿಂದ ಸಾಗುತ್ತಿದ್ದು, ಮತದಾರರು ಬೆಳಗ್ಗೆಯಿಂದಲೇ ಮತ ಚಲಾವಣೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಮತ ಚಲಾವಣೆ ಮಾಡಿದ್ದು, ಒಂದು ಕಾರಣದಿಂದ ಸಖತ್ ಸುದ್ದಿಯಲ್ಲಿದೆ.
ವಿಧಾನ ಸಭಾ ಚುನಾವಣೆ 2023ರ ಚುನಾವಣೆಯಲ್ಲಿ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ ಹಚ್ಚಲಾಗುತ್ತದೆ. ಆದರೆ, ಸಿದ್ದರಾಮಹುಂಡಿಯಲ್ಲಿ ಮತಗಟ್ಟೆ ಸಂಖ್ಯೆ 86ರಲ್ಲಿ ತಮ್ಮ ಮತಹಕ್ಕು ಚಲಾಯಿಸಿರುವ ಸಿದ್ದರಾಮಯ್ಯ ಅವರ ಬಲಗೈನ ತೋರು ಬೆರಳಿಗೆ ಶಾಯಿ ಹಚ್ಚಲಾಗಿದೆ. ಈ ಕುರಿತಾಗಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಸಿದ್ದರಾಮಹುಂಡಿಯಲ್ಲಿ ಮತಗಟ್ಟೆ ಸಂಖ್ಯೆ 86ರಲ್ಲಿ ಪುತ್ರ ಯತೀಂದ್ರ, ಸೊಸೆ ಸ್ಮಿತಾ ಜತೆಗೆ ತೆರಳಿ ಮತದಾನ ಮಾಡಿದ್ದಾರೆ. ಬಳಿಕ ಸಿದ್ದರಾಮನಹುಂಡಿಯಲ್ಲಿರುವ ಮನೆಯಲ್ಲಿ ಕೆಲಕಾಲ ವಿಶ್ರಾಂತಿ ಪಡೆದು, ಸಿದ್ದರಾಮೇಶ್ವರ ದೇವರ ದರ್ಶನ ಪಡೆದಿದ್ದಾರೆ.
ಸಾಂವಿಧಾನಿಕವಾಗಿ ಬಂದಿರುವ ಮತದಾನದ ಹಕ್ಕನ್ನು ಚಲಾಯಿಸಿದ್ದೇವೆಂಬುದನ್ನು ಸೂಚಿಸುವ ಹಾಗೂ ಹಕ್ಕನ್ನು ಚಲಾಯಿಸಿದ್ದಾನೆ ಎಂದು ಖಾತರಿಪಡಿಸುವ ಸಂಕೇತವಾಗಿ ಮತದಾರರ ಎಡಗೈನ ತೋರು ಬೆರಳಿಗೆ ಸುಲಭವಾಗಿ ಅಳಿಸಲಾಗದಂತಹ ಒಂದು ಶಾಯಿಯ ಗುರುತನ್ನು ಹಾಕಿರುತ್ತಾರೆ. ಈ ಶಾಯಿಯ ಗುರುತು ಆ ವ್ಯಕ್ತಿ ಈಗಾಗಲೇ ತನ್ನ ಮತದಾನದ ಹಕ್ಕನ್ನು ಚಲಾಯಿಸಿದ್ದಾನೆ ಎಂಬುದನ್ನು ಖಾತರಿ ಪಡಿಸುತ್ತದೆ.
ಇದನ್ನೂ ಓದಿ: ಮಕ್ಕಳೊಂದಿಗೆ ತೆರಳಿ ಮತ ಚಲಾಯಿಸಿದ ಸಿಎಂ ಬೊಮ್ಮಾಯಿ
ಎಡಗೈ ತೋರು ಬೆರಳಿಗೆ ಶಾಯಿ:ರಾಜ್ಯ ಚುನಾವಣಾ ಆಯೋಗ ಮತದಾನಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ರಾಜ್ಯದಲ್ಲಿ ಒಟ್ಟು 58,282 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾನ ಮಾಡಿದವರ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿಯ ಗುರುತು ಹಾಕಲಾಗುತ್ತದೆ.
ಇಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ತನಕ ಮತದಾನ ಮಾಡಲು ವ್ಯವಸ್ಥೆ ಮಾಡಲಾಗಿದೆ. ಇಂದು ಮತದಾನ ಚಲಾಯಿಸಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಬಾರಿ ಚುನಾವಣೆಯಲ್ಲಿ 2,66,82,156 ಪುರುಷ, 2,63,98,483 ಮಹಿಳೆ, 4,927 ಇತರ ಮತದಾರರು ಸೇರಿದಂತೆ ಒಟ್ಟು 5,30,85,566 ಮತದಾರರು ಈ ಬಾರಿ ಹಕ್ಕು ಚಲಾವಣೆ ಮಾಡಲು ಅವಕಾಶವಿದೆ.