ನ್ಯೂಸ್

Karnataka Assembly Election; ರಾಜಧಾನಿಯಲ್ಲಿ 4 ಕಡೆ ಮತ ಎಣಿಕೆ ವ್ಯವಸ್ಥೆ

ಬೆಂಗಳೂರು: ಬೆಂಗಳೂರು ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವು ನಗರದ ನಾಲ್ಕು ಕಡೆಗಳಲ್ಲಿ ನಡೆಯಲಿದೆ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಹೇಳಿದ್ದಾರೆ.

ನಗರದ ಸೆಂಟ್ ಜೋಸೆಫ್​​ ಇಂಡಿಯನ್ ಹೈಸ್ಕೂಲ್​​ನಲ್ಲಿ ಸ್ಥಾಪಿಸಿರುವ ಮತ ಎಣಿಕೆ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು. ಮತ ಎಣಿಕೆ ಕೇಂದ್ರಗಳಲ್ಲಿ ಎಲ್ಲ ರೀತಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮತ ಎಣಿಕೆ ಸಿಬ್ಬಂದಿ 3 ವಿಧದಲ್ಲಿ ಇರಲಿದ್ದಾರೆ. ಪ್ರತಿ ಟೇಬಲ್​​ಗೆ ಮೈಕ್ರೋ ಅಬ್ಸರ್ವರ್, ಮತ ಎಣಿಕೆ ಮೇಲ್ವಿಚಾರಕರು ಮತ್ತು ಮತ ಎಣಿಕೆ ಸಹಾಯಕರನ್ನು ನಿಯೋಜಿಸಲಾಗಿದೆ. ಪ್ರತಿ ಮತ ಎಣಿಕೆ ಕೊಠಡಿಗೆ 10 ರಿಂದ 14 ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ 2 ಟೇಬಲ್​​ಗಳನ್ನು ಪೋಸ್ಟಲ್ ಬ್ಯಾಲೆಟ್ ಮತಗಳ ಎಣಿಕೆಗೆ ಮೀಸಲಿಡಲಾಗಿದೆ ಎಂದರು.

ಬೆಂಗಳೂರು ನಗರ ಜಿಲ್ಲಾಧಿಕಾರಿ ಡಾ.ದಯಾನಂದ್ ಮಾತನಾಡಿ, ಮೇ 13ಕ್ಕೆ ನಡೆಯುವ ಮತ ಎಣಿಕೆ ಕಾರ್ಯಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರತಿ ಟೇಬಲ್​ಗಳಿಗೂ ವೆಬ್ ಕಾಸ್ಟಿಂಗ್ ವ್ಯವಸ್ಥೆ ಇದೆ. ಎಣಿಕಾ ಮೇಲ್ವಿಚಾರಕರು, ಸಹಾಯಕರಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಮೇ 12ಕ್ಕೆ ಮೈಕ್ರೋ ಅಬ್ಸರ್ವರ್ಸ್, ಎಣಿಕಾ ಮೇಲ್ವಿಚಾರಕರು ಹಾಗೂ ಎಣಿಕಾ ಸಹಾಯಕರಿಗೆ ಮತ್ತೊಂದು ಬಾರಿ ತರಬೇತಿ ನೀಡಲಾಗುವುದು. ಎಲ್ಲ ಕಡೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಮೂರು ಹಂತದದಲ್ಲಿ ಪೊಲೀಸ್ ಭದ್ರತಾ ವ್ಯವಸ್ಥೆ ಇದೆ ಎಂದು ಮಾಹಿತಿ ನೀಡಿದರು.

ಮತ ಎಣಿಕೆ ಕೇಂದ್ರಗಳ ವಿವರ:
ಬೆಂಗಳೂರು ಕೇಂದ್ರ: ಬಿಎಂಎಸ್ ಕಾಲೇಜು, ಬೂಗಲ್ ರಾಕ್ ರಸ್ತೆ, ಗಾಂಧಿ ಬಜಾರ್, ಬಸವನಗುಡಿ. * ಬೆಂಗಳೂರು ದಕ್ಷಿಣ: ಎಸ್‌ಎಸ್‌ಎಂಆರ್‌ವಿ ಪಿಯು ಕಾಲೇಜು, 26ನೇ ಮುಖ್ಯ ರಸ್ತೆ, 4ನೇ ಬ್ಲಾಕ್, ಜಯನಗರ * ಬೆಂಗಳೂರು ಉತ್ತರ: ಮೌಂಟ್ ಕಾರ್ಮಲ್ ಕಾಲೇಜು, ಪ್ಯಾಲೆಸ್ ರಸ್ತೆ, ವಸಂತನಗರ * ಬೆಂಗಳೂರು ನಗರ: ಸೆಂಟ್ ಜೋಸೆಫ್ ಇಂಡಿಯನ್ ಹೈ ಸ್ಕೂಲ್, ವಿಟ್ಟಲ್ ಮಲ್ಯ ರಸ್ತೆ.