ನ್ಯೂಸ್

ಬಿಪಿಎಲ್ ಕಾರ್ಡ್ ರದ್ದತಿಗೆ ಕರ್ನಾಟಕ ಸೇನಾಪಡೆ ಖಂಡನೆ

ಮೈಸೂರು: ಅವೈಜ್ಞಾನಿಕವಾಗಿ ಲಕ್ಷಾಂತರ ಬಡವರ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡುತ್ತಿರುವ ರಾಜ್ಯ ಸರ್ಕಾರ ಕ್ರಮ ಖಂಡಿಸಿ ಕರ್ನಾಟಕ ಸೇನಾ ಪಡೆಯಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.

ಹಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿದ ಪ್ರತಿಭಟನಾಕಾರರು, ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಬಾರದು ಎಂದು ಸರ್ಕಾರವನ್ನು ಆಗ್ರಹಿಸಿದರು.

ರಾಜ್ಯ ಸರ್ಕಾರ ಬಡವರಿಗೆ ನೀಡಿರುವ ಬಿಪಿಎಲ್ ಕಾರ್ಡ್ ಕಿತ್ತುಕೊಂಡು ಅವರ ಜೀವನವನ್ನೇ ನಾಶ ಮಾಡುತ್ತಿರುವುದು ಅತ್ಯಂತ ಖಂಡನೀಯ. ಜನತೆಗೆ ಐದು ಬಿಟ್ಟಿ ಭಾಗ್ಯಗಳನ್ನು ನೀಡಿ, ಈಗ ಆ ಭಾಗ್ಯಗಳಿಗೆ ಹಣ ಹೊಂದಿಸಲಾಗದೆ ಕಾರ್ಡ್ ರದ್ದು ಮಾಡಿರುವುದು ಅತ್ಯಂತ ಕೆಟ್ಟ ನಡವಳಿಕೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲ ಒಂದು ಹಗರಣ ನಡೆಯುತ್ತಲೇ ಇದೆ. ವಾಲ್ಮೀಕಿ ಹಗರಣ, ಮುಡಾ ಹಗರಣಗಳ ಜತೆಗೆ ಈಗ ಬೇಕಾಬಿಟ್ಟಿಯಾಗಿ ಬಡವರ, ನಿಜವಾದ ಲಾನುಭವಿಗಳ ರೇಷನ್ ಕಾರ್ಡ್‌ಗಳನ್ನು ಅವೈಜ್ಞಾನಿಕವಾಗಿ ರದ್ದು ಮಾಡಿರುವುದು ಅತ್ಯಂತ ನೋವಿನ ಸಂಗತಿ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಂದು ಕಡೆ ಸರ್ಕಾರ ಗ್ಯಾರಂಟಿಗಳನ್ನು ಕೊಟ್ಟು, ಮತ್ತೊಂದು ಕಡೆ ಬಿಪಿಎಲ್ ಕಾರ್ಡ್‌ಗಳನ್ನು ಕಿತ್ತುಕೊಂಡು ಜನರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ. ರಾಜ್ಯದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಬಿಪಿಎಲ್ ಕಾರ್ಡ್ ರದ್ದು ಮಾಡಿರುವುದು ಇತಿಹಾಸದಲ್ಲೇ ಇದೇ ಮೊದಲು. ಅದರಲ್ಲೂ ವಿಶೇಷವಾಗಿ ಅನ್ಯಧರ್ಮಿಯರ ಒಂದೇ ಒಂದು ಕಾರ್ಡ್‌ಗಳನ್ನು ರದ್ದು ಮಾಡದೆ, ಬರೀ ಹಿಂದೂಗಳ ಕಾಡುಗಳನ್ನೇ ರದ್ದು ಮಾಡಿರುವುದು, ಈ ಸರ್ಕಾರ ಹಿಂದೂ ವಿರೋಧಿ ಎಂದು ತೋರಿಸುತ್ತದೆ ಎಂದು ದೂರಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನೇಕ ಸೌಲಭ್ಯಗಳಿಂದ ಜನರು ವಂಚಿತವಾಗುತ್ತಿದ್ದಾರೆ.

ರಾಜ್ಯ ಸರ್ಕಾರ ಇಲ್ಲಿಯವರೆಗೆ ಬಿಪಿಎಲ್ ಕಾರ್ಡ್‌ನ ಮಾನದಂಡದ ವಿಚಾರವಾಗಿ ಇನ್ನು ಸ್ಪಷ್ಟ ನಿರ್ಧಾರವನ್ನು ಕೈಗೊಂಡಿಲ್ಲ ದಂತೆ ಕಾಣಿಸುತ್ತದೆ ಎಂದು ಕಿಡಿಕಾರಿದರು.

ಬಿಪಿಎಲ್ ಕಾರ್ಡ್ ಬರೀ ಅಕ್ಕಿಗೆ ಮಾತ್ರ ಅಲ್ಲ. ಈ ಕಾರ್ಡ್ ನಿಂದ ಜನರು ಆಸ್ಪತ್ರೆ, ಸರ್ಕಾರದ ಇನ್ನಿತರೆ ಯೋಜನೆಗಳನ್ನು ಪಡೆಯಲು ಸುಲಭವಾಗಿದೆ. ರಾಜ್ಯ ಸರ್ಕಾರ ನಿಜವಾಗಿಯೂ ನೈತಿಕತೆ ಇದ್ದರೆ, ಅವೈಜ್ಞಾನಿಕವಾಗಿ ರದ್ದು ಮಾಡಿರುವ 11ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ಸರಿಪಡಿಸಬೇಕು, ಇಲ್ಲವಾದಲ್ಲಿ ರಾಜ್ಯದ ಜನತೆ ಸರಿಯಾದ ಪಾಠ ಕಲಿಸುತ್ತಾರೆ ಎಂದರು.

ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್‌ಗೌಡ , ಮುಖಂಡ ಕೃಷ್ಣಪ್ಪ, ಪ್ರಭುಶಂಕರ್, ಪ್ರಜೀಶ್, ಸಿಂಧುವಳ್ಳಿ ಶಿವಕುಮಾರ್, ನಿತ್ಯಾನಂದ, ಡಾ.ಎಸ್.ಎ.ನರಸಿಂಹೇಗೌಡ, ಕುಮಾರ್, ಕೆ.ಸಿ.ಗುರು ಮಲ್ಲಪ್ಪ, ವಿಜಯೇಂದ್ರ, ಸ್ವಾಮಿಗೌಡ, ನೇಹಾ, ಮಂಜುಳಾ, ಭಾಗ್ಯಮ್ಮ, ಎಚ್.ಗಿರೀಶ್ , ರಘು ಅರಸ್, ರಾಧಾಕೃಷ್ಣ ಇತರರು ಇದ್ದರು.