ಆರ್.ತುಳಸಿಕುಮಾರ್
ನವದೆಹಲಿ: ಗ್ರಾಮೀಣ ಆರ್ಥಿಕತೆಯನ್ನು ಸುಸ್ಥಿರ ಹಾಗೂ ಸಬಲೀಕರಣಗೊಳಿಸುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಘೋಷಿಸಿರುವ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಎಂ-ಪ್ಯಾಕ್ಸ್) ರಚನೆಯಲ್ಲಿ ಕರ್ನಾಟಕವು ದಕ್ಷಿಣ ಭಾರತದ ರಾಜ್ಯಗಳಲ್ಲಿ ಮುಂಚೂಣಿಯಲ್ಲಿದೆ.
ದೇಶಾದ್ಯಂತ 2 ಲಕ್ಷ ಹೊಸ ಎಂ-ಪ್ಯಾಕ್ಸ್ ಸ್ಥಾಪಿಸಿ ಆ ಮೂಲಕ ಗ್ರಾಮೀಣ ಪ್ರದೇಶದಲ್ಲಿರುವ ಜನರಿಗೆ ಸಹಕಾರ ತತ್ವದಡಿಯಲ್ಲಿ ಹೆಚ್ಚಿನ ಸೇವೆ ಮತ್ತು ಸೌಲಭ್ಯಗಳನ್ನು ಒದಗಿಸಲು ಸಂಕಲ್ಪ ಕೈಗೊಳ್ಳಲಾಗಿದೆ. ಇದರ ಸಾಕಾರಕ್ಕಾಗಿ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್‌ಒಪಿ) ಪ್ರಕಟವಾದ ಮೂರೇ ತಿಂಗಳಲ್ಲಿ 11,695 ಎಂ-ಪ್ಯಾಕ್ಸ್ (ಡೇರಿ/ಮತ್ಸೃ ಸಂಘಗಳು ಸೇರಿ) ನೋಂದಾಯಿಸಿ ಆರಂಭಿಕ ಚಟುವಟಿಕೆಗೆ ಚಾಲನೆ ನೀಡಲಾಗಿದೆ. ಇವುಗಳಲ್ಲಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕರ್ನಾಟಕವು ಸೀಮಿತ ಅವಧಿಯಲ್ಲಿ 126 ಸಂಖ್ಯೆಯಷ್ಟು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಎಂ-ಪ್ಯಾಕ್ಸ್), 417 ವಿವಿಧೋದ್ದೇಶ ಡೇರಿ ಸಹಕಾರ ಸೊಸೈಟಿ (ಎಂಡಿಸಿಎಸ್) ಹಾಗೂ 16 ವಿವಿಧೋದ್ದೇಶ ಮತ್ಸೃ ಸಹಕಾರ ಸೊಸೈಟಿ (ಎಂಎಫ್ಸಿಎಸ್) ಸ್ಥಾಪಿಸಿ ಸಹಕಾರಿಗಳ ಸಂಘಟನೆ ಹಾಗೂ ಅವರಿಗೆ ಸೌಲಭ್ಯ ಒದಗಿಸಲು ದಾಪುಗಾಲು ಇಟ್ಟಿದೆ.
ಪ್ರಸ್ತುತ ಪ್ಯಾಕ್ಸ್‌ಗಳು ಕೃಷಿ ಸಾಲ, ಆಭರಣ ಸಾಲ ಸಹಿತ ಸೀಮಿತ ಸೇವೆಗಳನ್ನು ಮಾತ್ರ ತನ್ನ ಸದಸ್ಯರಿಗೆ ನೀಡುತ್ತಿವೆ. ಇದರಿಂದ ಸಹಕಾರ ಸಂಘಗಳಿಗೆ ಹೆಚ್ಚಿನ ಆದಾಯ ಇಲ್ಲದೆ ನಿಂತ ನೀರಾಗಿವೆ. ಇಂತಹ ಸ್ಥಿತಿಯಿಂದ ಹೊರತಂದು ಪ್ಯಾಕ್ಸ್‌ಗಳು ವೃತ್ತಿಪರತೆ ಮೈಗೂಡಿಸಿಕೊಂಡು ಹೆಚ್ಚು ರೈತರಿಗೆ ಹೊಸ ಹೊಸ ಸೌಲಭ್ಯಗಳನ್ನು ಒದಗಿಸಲು ಎಂ-ಪ್ಯಾಕ್ಸ್‌ಗಳನ್ನು ರಚಿಸಲಾಗುತ್ತಿದೆ. ಎಲ್‌ಪಿಜಿ ವಿತರಣೆ ಲೈಸೆನ್ಸ್, ಜನೌಷಧ ಮಳಿಗೆ, ರಸಗೊಬ್ಬರ ಮಳಿಗೆ ಸ್ಥಾಪಿಸಲು ಅವಕಾಶ ಮಾಡಿಕೊಡಲಾಗಿದೆ. ಸಂಸ್ಕರಣೆ-ಸಂಗ್ರಹಣೆ-ಪ್ಯಾಕಿಂಗ್ ಘಟಕಗಳು ಸೇರಿ ರೈತ ಕೇಂದ್ರಿತ ಇನ್ನಿತರ ಸೌಲಭ್ಯಗಳನ್ನು ಒದಗಿಸಿ ಆದಾಯ ವೃದ್ಧಿಯೊಂದಿಗೆ ಆರ್ಥಿಕ ಸ್ವಾವಲಂಬನೆ ಸಾಧಿಸಲು ಎಂ-ಪ್ಯಾಕ್ಸ್ ರಚನೆಯ ಉದ್ದೇಶವಾಗಿದೆ.
ಮುಂದಿನ ಐದು ವರ್ಷದಲ್ಲಿ 2 ಲಕ್ಷ ಎಂ-ಪ್ಯಾಕ್ಸ್ ರಚನೆ ಪೂರ್ಣಗೊಳ್ಳುವ ವೇಳೆ ಸಹಕಾರ ಸಂಘಗಳನ್ನು ಪೂರ್ಣವಾಗಿ ಗಣಕೀರಣಗೊಳಿಸಲಾಗುವುದು. ಜತೆಗೆ ಡೇರಿ ಸಹಕಾರ ಸೊಸೈಟಿಗಳಿಗೆ ಮೈಕ್ರೋ ಎಟಿಎಂ ಸೌಲಭ್ಯದೊಂದಿಗೆ ಅದರ ಎಲ್ಲ ಸದಸ್ಯ ಹೈನುಗಾರರಿಗೆ ರುಪೇ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸಲಾಗುವುದು. ಭವಿಷ್ಯದಲ್ಲಿ ಈ ಕಾರ್ಡ್‌ಗಳ ಮೂಲಕವೇ ಹಾಲಿನ ಹಣ, ಕಿರು ಸಾಲ ಸೌಲಭ್ಯ ಒದಗಿಸಲಾಗುವುದು ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಷಾ ಪ್ರತಿಪಾದಿಸಿದ್ದಾರೆ.
ಜನೌಷಧ ಕೇಂದ್ರಗಳ ಮಂಜೂರು:
ಗ್ರಾಮೀಣ ಜನರಿಗೆ ತ್ವರಿತ ಸಮಯದಲ್ಲಿ ಹಾಗೂ ಅತಿ ಕಡಿಮೆ ಬೆಲೆಯಲ್ಲಿ ಜನರಿಕ್ ಮೆಡಿಸಿನ್ ಲಭ್ಯವಾಗುವಂತೆ ಮಾಡಲು ಪ್ಯಾಕ್ಸ್‌ಗಳಿಗೆ ಜನೌಷಧ ಕೇಂದ್ರಗಳನ್ನು ನಡೆಸಲು ಮಂಜೂರಾತಿ ನೀಡಲಾಗುತ್ತಿದೆ. ಹಳ್ಳಿಗರು ಜೀವ ಉಳಿಸುವ ಔಷಧಕ್ಕಾಗಿ ಹೋಬಳಿ/ತಾಲೂಕುಗಳಿಗೆ ತೆರಳಬೇಕಿರುವ ಕಾರಣ ಪಂಚಾಯ್ತಿ ಸ್ಥಳದಲ್ಲೇ ಔಷಧ ಕೈಗೆಟಕುವಂತೆ ಮಾಡಲು ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರ (ಪಿಎಂಬಿಜೆಕೆ) ಸ್ಥಾಪನೆಗೆ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ದೇಶಾದ್ಯಂತ 34 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿನ ಒಟ್ಟು 2,715 ಪ್ಯಾಕ್ಸ್‌ಗಳಿಗೆ ಭಾರತೀಯ ಔಷಧ ಹಾಗೂ ವೈದ್ಯಕೀಯ ಉಪಕರಣಗಳ ಬ್ಯುರೋ (ಪಿಎಂಬಿಐ) ಆರಂಭಿಕ ಒಪ್ಪಿಗೆ ನೀಡಿದೆ. ಇವುಗಳಲ್ಲಿ ಆಯಾ ರಾಜ್ಯಗಳ ಔಷಧ ನಿಯಂತ್ರಕರಿಂದ 768 ಪ್ಯಾಕ್ಸ್‌ಗಳಿಗೆ ಲೈಸೆನ್ಸ್ ವಿತರಿಸಿದ್ದು, 696ಕ್ಕೆ ಸ್ಟೋರ್ ಕೋಡ್‌ಗಳನ್ನು ನೀಡಿ ಕಾರ್ಯಾಚರಣೆಗೆ ಅಣಿಗೊಳಿಸಲಾಗಿದೆ.
ಎಲ್‌ಪಿಜಿ ವಿತರಣೆ ಲೈಸೆನ್ಸ್:
ಪ್ಯಾಕ್ಸ್ ಆದಾಯ ವೃದ್ಧಿಗಾಗಿ ಹೊಸದಾಗಿ ಎಲ್‌ಪಿಜಿ ವಿತರಣೆ ಲೈಸೆನ್ಸ್ ಪಡೆಯಲು ಅರ್ಹವಾಗಿವೆ. ಇದಕ್ಕಾಗಿ ಪೆಟ್ರೊಲಿಯಂ ನಿಯಮಗಳಿಗೆ ತಿದ್ದುಪಡಿ ಮಾಡಿದ್ದು, ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿದೆ. ಮೊದಲ ಹೆಜ್ಜೆಯಾಗಿ ಜಾರ್ಖಂಡ್‌ನ 2 ಪ್ಯಾಕ್ಸ್‌ಗಳಿಗೆ ಅನುಮತಿ ನೀಡಲಾಗುತ್ತಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಹೊಗೆ ರಹಿತ ಅಡುಗೆ ಮಾಡುವ ಉಪಕ್ರಮಕ್ಕೆ ಆದ್ಯತೆ ನೀಡಿದಂತಾಗಿದೆ.
ಹೊಸ ಪೆಟ್ರೋಲ್ ಪಂಪ್ ಡೀಲರ್‌ಶಿಪ್:
ಸಹಕಾರ ಸಚಿವಾಲಯದ ಉಪಕ್ರಮದಂತೆ ಹೊಸದಾಗಿ ಪೆಟ್ರೋಲ್/ಡೀಸೆಲ್ ಪಂಪ್ ಡೀಲರ್ಶಿಪ್ಗಳನ್ನು ರಿಟೇಲ್ ಕ್ಷೇತ್ರದಲ್ಲಿ ವಿತರಿಸುವ ವೇಳೆ ಪ್ಯಾಕ್ಸ್‌ಗಳಿಗೆ ಆದ್ಯತೆ ನೀಡುವ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಈ ನೂತನ ಕಾರ್ಯಕ್ರಮಕ್ಕಾಗಿಯೇ ತೈಲ ಮಾರುಕಟ್ಟೆ ಕಂಪನಿಗಳಿಂದ ಮಾರ್ಗಸೂಚಿ ಪ್ರಕಟಿಸಲಾಗಿದೆ. ಈಗಾಗಲೇ 25 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿನ ಒಟ್ಟು 286 ಪ್ಯಾಕ್ಸ್‌ಗಳು ಅರ್ಜಿ ಹಾಕಿವೆ. ಇವುಗಳ ಕಾರ್ಯಾಚರಣೆಯಿಂದ ಸಹಕಾರ ಸಂಘಗಳಿಗೆ ಹೆಚ್ಚಿನ ಆದಾಯ ಹಾಗೂ ಉದ್ಯೋಗ ಸೃಷ್ಟಿಗೂ ಅವಕಾಶ ಸಿಗಲಿದೆ.
ದಕ್ಷಿಣ ಭಾರತದಲ್ಲಿ ಹೊಸ ಪ್ಯಾಕ್ಸ್‌ಗಳ ರಚನೆ ವಿವರ:
ರಾಜ್ಯದ ಹೆಸರು ಎಂಪ್ಯಾಕ್ಸ್ ಎಂಡಿಸಿಎಸ್ ಎಂಎಫ್ಸಿಎಸ್
ಕರ್ನಾಟಕ 126 417 16
ಆಂಧ್ರಪ್ರದೇಶ 0 849 1
ತೆಲಂಗಾಣ 0 15 67
ತಮಿಳುನಾಡು 20 445 21
ಕೇರಳ - - -
ಗೋವಾ 12 0 0
ಪುದುಚೇರಿ 2 1 3