ರಮೇಶ ಮೇಳಕುಂದಾ ಕಲಬುರಗಿ
ಜಿಲ್ಲೆಯಲ್ಲಿ ಕಟ್ಟಡ ಕಾರ್ಮಿಕರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದ್ದು, ನಗರದಲ್ಲಿ ವಿವಿಧೆಡೆ ಕಟ್ಟಡ ಕಾರ್ಮಿಕರು ಕೆಲಸ ಅರಸಿ ಬರುವ ಸ್ಥಳಗಳಲ್ಲಿ ಸೂಕ್ತ ಭದ್ರತೆ, ರಕ್ಷಣೆ, ದಾಖಲೀಕರಣದ ಪದ್ಧತಿ ಇಲ್ಲದ್ದಕ್ಕೆ ಯಾರು ಬೇಕಾದರೂ ಕಾರ್ಮಿಕರನ್ನು ಕರೆದುಕೊಂಡು ಹೋಗಿ, ಯಾವುದೇ ಕೆಲಸಕ್ಕು ಹಚ್ಚಬಹುದು, ಬೇರೆ ಕೃತ್ಯಗಳನ್ನು ಎಸಗಬಹುದು ಎಂಬAತ ಆತಂಕಕಾರಿ ಸ್ಥಿತಿ ಸೃಷ್ಟಿಯಾಗಿದೆ.
ನಗರದಲ್ಲಿ ನಿತ್ಯ ಸಾವಿರಾರು ಕಾರ್ಮಿಕರು ನಗರ ಸೇರಿ ಸುತ್ತಲಿನ ಗ್ರಾಮಗಳಿಗೂ ಕಟ್ಟಡ, ಜಮೀನುಗಳ ಕೆಲಸಕ್ಕೆ ಹೋಗಲು ಒಂದೆಡೆ ಸೇರುವ ಪದ್ಧತಿ ಇದೆ. ಅಲ್ಲಿಂದ ಕಾರ್ಮಿಕರನ್ನು ಬೇರೆ ಬೇರೆ ಕಡೆ ಕೆಲಸಗಳಿಗೆ ಗುತ್ತಿಗೆದಾರರು, ಕಟ್ಟಡಗಳ ಮಾಲಿಕರು ಕರೆದುಕೊಂಡು ಹೋಗುತ್ತಾರೆ. ಆದರೆ ಯಾರು ಯಾರನ್ನು ಎಲ್ಲಿಗೆ, ಎಷ್ಟು ಕೂಲಿಗೆ ಕರೆದುಕೊಂಡು ಹೋಗುತ್ತಾರೆ ಎಂಬ ಮಾಹಿತಿ ತಿಳಿಯುತ್ತಿಲ್ಲ. ಇದರಿಂದ ಕಾರ್ಮಿಕರಿಗೆ ಕೂಲಿ ಮತ್ತು ಜೀವದ ರಕ್ಷಣೆಯೂ ಇಲ್ಲದಂತಾಗಿದೆ.
ನಗರದ ಗಂಜ್‌ನ ಮಿಜಗುರಿ ನಾಕಾ, ಓಂ ನಗರ ಗೇಟ್, ರೈಲ್ವೆ ನಿಲ್ದಾಣದ ಎದುರು, ಖಾದ್ರಿ ಚೌಕ್ ಬಳಿ ಸುತ್ತಲಿನ ಹಳ್ಳಿಗಳ ಮತ್ತು ನಗರದ ಸಾವಿರಾರು ಬಡ ಕಾರ್ಮಿಕರು ಒಂದೆಡೆ ಸೇರಿ, ಕೆಲಸ ಕೇಳುತ್ತ ಅಲೆಯುತ್ತಾರೆ. ಅಲ್ಲಿಗೆ ಬರುವ ಗುತ್ತಿಗೆದಾರರು, ಕಟ್ಟಡಗಳ ಮಾಲಿಕರ ಜತೆ ನೇರ ಮಾತು ಕತೆ ನಡೆದು, ಅವರನ್ನು ವಾಹನಗಳಲ್ಲಿ ಕರೆದುಕೊಂಡು ಹೋಗುತ್ತಾರೆ. ಮುಂದೇ ಏನಾಗುತ್ತದೆ ಎಂಬ ಮಾಹಿತಿ ಅವರಿಬ್ಬರನ್ನು ಹೊರತುಪಡಿಸಿ ಯಾರಿಗೂ ತಿಳಿಯದೇ ಇರುವುದರಿಂದ ಕಾರ್ಮಿಕರು ನಿತ್ಯ ಅತಂತ್ರ ಸ್ಥಿತಿಯಲ್ಲಿಯೇ ಕೆಲಸಕ್ಕೆ ಹೋಗುವಂತ ಸ್ಥಿತಿ ಆಗಿದೆ.
ಕಾರ್ಮಿಕರಿಗೆ ರಕ್ಷಣೆ, ಕೆಲಸದ ಭದ್ರತೆ ಒದಗಿಸುವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿದ್ದ ಕಾರ್ಮಿಕ ಇಲಾಖೆ, ಪೊಲೀಸರು, ಜಿಲ್ಲಾಡಳಿತ ಮೌನ ವಹಿಸಿದ್ದರಿಂದ ಕಾರ್ಮಿಕರನ್ನು ವಿಶೇಷವಾಗಿ ಮಹಿಳಾ ಕಾರ್ಮಿಕರನ್ನು ಹೊತ್ತೊಯ್ದು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಕಾರ್ಮಿಕ ವರ್ಗದ ಆಗ್ರಹ.
ಬಾಕ್ಸ್ ಜೋಡಿ ಕೊಲೆ, ನಾಪತ್ತೆ ಆದ್ರೂ ಮುನ್ನೆಚ್ಚರಿಕೆ ಇಲ್ಲ ನಗರದ ಗಂಜ್‌ನಿAದ ಕೂಲಿ ಕೆಲಸಕ್ಕೆ ಹೋಗಿದ್ದ ತಾಜಸುಲ್ತಾನಪುರದ ಶರಣಮ್ಮ (೪೫), ಚಂದಮ್ಮ (೪೫) ಅವರನ್ನು ನಗರದ ಹೊರವಲಯದ ತಾವರಗೇರಾ ಕ್ರಾಸ್ ಬಳಿ ೨೦೨೪ ಏ.೮ರಂದು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಅವರು ಕೂಲಿ ಕೆಲಸಕ್ಕೆ ಬಂದಿದ್ದರು. ಆದರೆ ಒಂದು ವರ್ಷವಾಗುತ್ತ ಬಂದರೂ ಇನ್ನು ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜ.೨೪ರಂದು ಇದೇ ಗಂಜ್ ಬಳಿಯ ಮಿಜಗುರಿ ನಾಕಾ ಬಳಿ ಕೂಲಿ ಕೆಲಸ ಅರಸಿ ಹೋದ ಮೈನಾಬಾಯಿ ನಾಪತ್ತೆಯಾದ ಕುರಿತು ನಗರ ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವೂ ತನಿಖೆಯೂ ಓರ್ವನ ಅನೈಸರ್ಗಿಕ ಸಾವು ಆಗುವ ಮೂಲಕ ಭಿನ್ನ ತಿರುವು ಪಡೆಯಿತು. ಕಾರಣ ಹೊರ ಬರಲೇ ಇಲ್ಲ.
ಕಾರ್ಮಿಕರು ನಿಲ್ಲುವ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಸೇರಿ ವಿವಿಧ ರಕ್ಷಣಾ ಕ್ರಮಗಳನ್ನು ಹಿಂದೆ ಕೈಗೊಳ್ಳಲಾಗಿದೆ. ಇದೀಗ ಪುನಃ ಆ ಕುರಿತು ಪರಿಶೀಲಿಸಿ, ಹೆಚ್ಚಿನ ರಕ್ಷಣೆ, ನಿಗಾ ಇಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. | ಡಾ.ಶರಣಪ್ಪ ಎಸ್.ಡಿ. ನಗರ ಪೊಲೀಸ್ ಆಯುಕ್ತ ಕಲಬುರಗಿ
ಸತ್ತಾಗ ಸಭೆ ನಡೆಸಿ, ಕೈಬಿಟ್ರು ೨೦೨೪ ಏ.೮ರಂದು ತಾವರಗೇರಾ ಕ್ರಾಸ್ ಬಳಿ ಇಬ್ಬರು ಮಹಿಳಾ ಕೂಲಿ ಕಾರ್ಮಿಕರನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಅದು ಇಡೀ ಜಿಲ್ಲೆಯಲ್ಲಿ ಸಂಚಲನ ಮೂಡಿಸಿತ್ತು. ಆಗ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಪೊಲೀಸರು ಸಭೆ ನಡೆಸಿ, ರಕ್ಷಣಾ ಕ್ರಮ ಕೈಗೊಳ್ಳುವ ಬಗ್ಗೆ ಭರ್ಜರಿ ಭಾಷಣ ಮಾಡಿದ್ದರು. ಆದರೆ ನಂತರ ಆ ವಿಷಯವನ್ನೇ ಮರೆತು ಬಿಟ್ಟರು. ಅಂದು ನಿರ್ಲಕ್ಷಿಸಿದ್ದರ ಪರಿಣಾಮ ಜ.೨೪ರಂದು ಮೈನಾಬಾಯಿ ನಾಪತ್ತೆಯಾಗಿದ್ದಾಳೆ. ಕೊಲೆಯಂತ ಗಂಭೀರ ಪ್ರಕರಣ ನಡೆದಿದ್ದರೂ ಪೊಲೀಸರು, ಕಾರ್ಮಿಕ ಇಲಾಖೆ ಮೈಮರೆತ್ತಿರುವುದು ದುರಂತ. ಏನಾಗಬೇಕಿದೆ... * ಕಾರ್ಮಿಕರ ಆಶ್ರಯ ತಾಣಗಳನ್ನು ನಿರ್ಮಿಸಬೇಕು * ಕಾರ್ಮಿಕರು ನಿಲ್ಲುವ ಒಬ್ಬ ಅಧಿಕಾರಿಯನ್ನು ನೇಮಿಸಿ, ನಿಗಾ ಇಡಬೇಕು * ಗುತ್ತಿಗೆದಾರರ ಕಾರ್ಯಚಟುವಟಿಕೆಗಳ ಮೇಲೆ ಪೊಲೀಸ್ ನಿಗಾ ಇಡಬೇಕು. * ಆಶ್ರಯ ತಾಣಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು * ರಿಜಿಸ್ಟಾರ್ ಬುಕ್ ನಿರ್ವಹಣೆ ಮಾಡಿ, ಯಾರು ಯಾರನ್ನು ಕರೆದೊಯ್ದ ಮಾಹಿತಿ ಸಂಗ್ರಹಿಸಬೇಕು * ಕಾರ್ಮಿಕರ ನಿಲುಗಡೆಗೆ ಸುರಕ್ಷಿತ ಸ್ಥಳಗಳನ್ನು ಗುರುತಿಸಬೇಕು.
ತಾವರಗೇರಾ ಜೋಡಿ ಕೊಲೆ ನಂತರ ಕ್ರಮ ಕೈಗೊಂಡಿದ್ದರೆ ಮೈನಾಬಾಯಿ ನಾಪತ್ತೆ ಆಗುತ್ತಿರಲಿಲ್ಲ. ಪೊಲೀಸರು, ಕಾರ್ಮಿಕ ಇಲಾಖೆ ಕಾರ್ಮಿಕರ ರಕ್ಷಣೆಯಲ್ಲಿ ದಿವ್ಯ ನಿರಾಸಕ್ತಿ ತೋರಿಸಿದೆ. ಕೂಡಲೇ ಆಶ್ರಯ ತಾಣ ನಿರ್ವಹಿಸಿ, ಕಾರ್ಮಿಕರಿಗೆ ರಕ್ಷಣೆ, ಕೂಲಿ ಕೆಲಸಕ್ಕೆ ಭದ್ರತೆ ಒದಗಿಸಿ, ಜೀವ ಮತ್ತು ಕೂಲಿಯ ಭರವಸೆ ಒದಗಿಸಬೇಕು. | ಹಣಮಂತ ಪೂಜಾರಿ, ಜಂಟಿ ಕಾರ್ಯದರ್ಶಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ನಗರದ ವಿವಿಧೆಡೆ ನಿಲ್ಲುವ ಕಾರ್ಮಿಕರಿಗೆ ಆಶ್ರಯ ತಾಣಗಳನ್ನು ನಿರ್ಮಿಸಲು ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೂರು ಕಡೆ ಸ್ಥಳವನ್ನು ಸಹ ನಿಗದಿಪಡಿಸಿದ್ದು, ಸ್ಥಳ ದೊರೆತ ತಕ್ಷಣ ಆಶ್ರಯ ತಾಣ ನಿರ್ಮಿಸಿ, ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು. | ಶರಣಪ್ಪ ಹಳಿಮನಿ, ಕಾರ್ಮಿಕ ಅಧಿಕಾರಿ