ಕರ್ಮಭೂಮಿ ಎಕ್ಸ್ಪ್ರೆಸ್ನಲ್ಲಿ ಏಕಾಏಕಿ ಬೆಂಕಿ, ಪ್ರಯಾಣಿಕರಲ್ಲಿ ಹೆಚ್ಚಿದ ಆತಂಕ.
ಕೋಚ್ ಪ್ಯಾನ್ನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದಾಗಿ ಕಾಣಿಸಿಕೊಂಡ ಬೆಂಕಿ.
ರೈಲ್ವೆ ಅಧಿಕಾರಿಗಳು, ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ಯಶಸ್ವಿ
ಛಂಡೀಗಢ: ಪಂಜಾಬ್ನ ಪಟಿಯಾಲ ಜಿಲ್ಲೆಯ ರಾಜಪುರದ ಬಳಿ ಚಲಿಸುತ್ತಿದ್ದ ಕರ್ಮಭೂಮಿ ಎಕ್ಸ್ಪ್ರೆಸ್ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರನ್ನು ಆತಂಕಕ್ಕೀಡು ಮಾಡಿತ್ತು. ಸದ್ಯ ಪರಿಸ್ಥಿತಿ ತಹಬದಿಗೆ ಬಂದಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಶುಕ್ರವಾರ ನ.6ರಂದು ಮಧ್ಯಾಹ್ನ 1 ಗಂಟೆಗೆ ನಾಲ್ಕು ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಬಗ್ಗೆ ಮಾಹಿತಿ ಪಡೆಯುತ್ತಲೇ ಎಚ್ಚೆತ್ತ ರೈಲ್ವೆ ಅಧಿಕಾರಿಗಳು ಹಾಗೂ ಅಗ್ನಿ ಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಅದೃಷ್ಟವಶಾತ್ ರೈಲಿನಲ್ಲಿದ್ದ ಯಾವುದೇ ಪ್ರಯಾಣಿಕರಿಗೆ ಪ್ರಾಣಾಪಾಯ ಸಂಭವಿಸಿಲ್ಲ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳ ಪ್ರಕಾರ, ನಿರ್ಜನ ಪ್ರದೇಶದಲ್ಲಿ ಅರ್ಧಕ್ಕೆ ನಿಂತ ರೈಲಿನಿಂದ ಕಪ್ಪು ದಟ್ಟ ಹೊಗೆ ಹೊರ ಬರುತ್ತಿರುವುದು, 300 ಕ್ಕೂ ಹೆಚ್ಚು ಜನ ಪ್ರಯಾಣಿಕರು ರೈಲಿನಿಂದ ಇಳಿದು ಸುರಕ್ಷತಾ ಸ್ಥಳದಲ್ಲಿ ನಿಂತು ರೈಲನ್ನೇ ದಿಟ್ಟಿಸುತ್ತಿರುವ ದೃಶ್ಯಗಳು ಹರಿದಾಡುತ್ತಿದೆ.
ಎಕ್ಸ್ಪ್ರೆಸ್ನ ಒಂದು ಬೋಗಿಯಲ್ಲಿರುವ ಫ್ಯಾನ್ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡಿದೆ. ಇದು ಇತರ ಇನ್ನೆರಡು ಬೋಗಿಗೂ ಹರಡಿತು. ಕೂಡಲೇ ಮಾಹಿತಿ ತಿಳಿದು ಬಂದ ರೈಲ್ವೆ ಅಧಿಕಾರಿಗಳು ಬೆಂಕಿ ನಂದಿಸಿದ್ದಾರೆ. ಈ ಘಟನೆಯಿಂದ ಪ್ರಯಾಣಿಕರು ಆತಂಕ್ಕೆ ಒಳಗಾಗಿದ್ದರು ಎಂದು ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್ಪಿ) ಎಸ್ಎಚ್ಒ ಗುರುಪ್ರೀತ್ ಸಿಂಗ್ ಹೇಳಿದರು.
ಸದ್ಯ ಪರಿಸ್ಥಿತಿ ತಹಬದಿಗೆ ಬಂದಿದೆ, ಪ್ರಯಾಣಿಕರಿಗೆ ಪರ್ಯಾಯವಾಗಿ ಪ್ರಯಾಣಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಬೋಗಿಗಳಿಗೆ ಏನೆಲ್ಲ ಹಾನಿಯಾಗಿದೆ. ಎಷ್ಟು ನಷ್ಟವಾಗಿದೆ ಎನ್ನುವ ಬಗ್ಗೆ ಶೀಘ್ರದಲ್ಲೇ ಮಾಹಿತಿ ಹಂಚಿಕೊಳ್ಳಲಾಗುತ್ತದೆ ಎಂದು ಹೇಳಿದರು, (ಏಜೆನ್ಸೀಸ್).