ರಾಮಕೃಷ್ಣ ಆಶ್ರಮದ ಸಭಾಂಗಣದಲ್ಲಿ ಶ್ರೀಶಾ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ವತಿಯಿಂದ ನಡೆದ ಕಾರ್ಗಿಲ್ ವಿಜಯೋತ್ಸ ಕಾರ್ಯಕ್ರಮದಲ್ಲಿ ಸಾಹಸಿ ಯೋಧರಾದ ಗ್ರೂಪ್ ಕ್ಯಾಪ್ಟನ್ ಸುಧೀರ್ ಜಿ ಅಮೀನ್, ಕರ್ನಲ್ ಪದ್ಮನಾಭ ಪ್ರಭು, ಕಮೊಡೋರ್ ಅತುಲ್ ಕುಮಾರ್ ರಸ್ತೋಗಿ ಅವರನ್ನು ಗೌರವಿಸಲಾಯಿತು.
ಮಂಗಳೂರು: ರಾಮಕೃಷ್ಣ ಆಶ್ರಮದ ಸಭಾಂಗಣದಲ್ಲಿ ಶ್ರೀಶಾ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ವತಿಯಿಂದ 27ನೇ ಕಾರ್ಗಿಲ್ ವಿಜಯೋತ್ಸ ಆಚರಿಸಲಾಯಿತು. ಕಾರ್ಗಿಲ್ ಯುದ್ಧದಲ್ಲಿ ವೀರಮರಣ ಅಪ್ಪಿ ಮರಣೋತ್ತರವಾಗಿ ಪರಮವೀರ ಚಕ್ರ ಪುರಸ್ಕಾರ ಪಡೆದ ಅಮರ ಯೋಧರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜೀ, ಕಾರ್ಗಿಲ್ ಗಡಿಯೊಳಗೆ ಮೋಸದಿಂದ ನುಗ್ಗಿದ್ದ ಶತ್ರುಗಳನ್ನು ಹೊರಗಟ್ಟಿ ಭಾರತದ ಗಡಿಯನ್ನು ಮರಳಿ ಪಡೆದ ಈ ದಿನ ಪ್ರತಿಯೊಬ್ಬ ಭಾರತೀಯನಿಗೂ ಪವಿತ್ರವಾದದ್ದು. ಸೈನಿಕರು ದೇಶದ ಗಡಿಯಲ್ಲಿ ಹೊರಗಿನ ಶತ್ರುಗಳಿಂದ ನಮಗಾಗಿ ರಕ್ಷಣೆ ನೀಡಿದರೆ, ದೇಶದ ಒಳಗಿರುವ ಶತ್ರುಗಳ ಬಗ್ಗೆ ಜಾಗೃತರಾಗಿರುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ ಎಂದರು.
ಮಾಜಿ ಎಂಎಲ್‌ಸಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿ, ನಮಗೆ ದೇಶವೇ ಮೊದಲು ಎಂಬ ಭಾವನೆ ಬರಬೇಕು. ಯೋಧರ ತ್ಯಾಗ-ಬಲಿದಾನಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳಿಗೆ ಅವರನ್ನು ಹೆಚ್ಚು ಕರೆತರಬೇಕು. ಶ್ರೀಶಾ ಸೊಸೈಟಿಯಂತಹ ಆರ್ಥಿಕ ಸಂಸ್ಥೆ ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ ಎಂದರು.
ನಿವೃತ್ತ ಕರ್ನಲ್ ಎನ್.ಎಸ್. ಭಂಡಾರಿ ಕಾರ್ಗಿಲ್ ಯುದ್ಧದ ರೋಚಕ ಕ್ಷಣಗಳ ಮಾಹಿತಿ ಹಂಚಿಕೊಂಡರು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕಿ ಭಾರತಿ ಜಿ. ಭಟ್ ಇದ್ದರು.
ಶ್ರೀಶಾ ಸೌಹಾರ್ದ ಸೊಸೈಟಿಯ ಅಧ್ಯಕ್ಷ ಎಂ.ಎಸ್. ಗುರುರಾಜ್ ಸ್ವಾಗತಿಸಿದರು. ನಿರ್ದೇಶಕ ಪ್ರಸನ್ನ ಕುಮಾರ್ ವಂದಿಸಿದರು. ರಂಜನಾ ಹೆಗಡೆ ಮತ್ತು ಕುಸುಮಾ ಐತಾಳ್ ಪ್ರಾರ್ಥಿಸಿದರು. ಖ್ಯಾತ ನಿರೂಪಕ ಕೆ.ಎ. ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.
ಭಾರತೀಯ ವಾಯು ಸೇನೆಯಲ್ಲಿ ಮೂರು ದಶಕಗಳ ಸುದೀರ್ಘ ಸೇವೆ ಸಲ್ಲಿಸಿರುವ ಗ್ರೂಪ್ ಕ್ಯಾಪ್ಟನ್ ಸುಧೀರ್ ಜಿ ಅಮೀನ್, ಭಾರತ ಸೇನೆಯಲ್ಲಿ ಟೆಲಿಕಮ್ಯುನಿಕೇಷನ್ ಮೆಕ್ಯಾನಿಕ್, ಸೈನ್ಯಾಧಿಕಾರಿಯಾಗಿ ಬಡ್ತಿ ಹೊಂದಿದ ಕರ್ನಲ್ ಪದ್ಮನಾಭ ಪ್ರಭು, ಭಾರತೀಯ ನೌಕಾದಳದಲ್ಲಿ ಕಮಿಷನ್ ಕಮೊಡೋರ್ ಅತುಲ್ ಕುಮಾರ್ ರಸ್ತೋಗಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಡಾ. ಸಿಂಧು ಭಟ್ ಅವರು ರೂಪಿಸಿ ನಿರೂಪಿಸಿದ ಕಾರ್ಗಿಲ್ ಯುದ್ಧ ಕುರಿತ ವಿಶೇಷ ಸಾಕ್ಷ್ಯಚಿತ್ರ ಪ್ರದರ್ಶನಗೊಂಡಿತು.