ನ್ಯೂಸ್

VIDEO| ಕಾರ್ಗಿಲ್​ ಯುದ್ಧ ಭೂಮಿಯ ಮಣ್ಣು ಕರ್ನಾಟಕಕ್ಕೆ!

arunakunigal

ಕೋಲಾರ: ಕಾರ್ಗಿಲ್​ ಅಂದಾಕ್ಷಣ ನಮ್ಮ ದೇಶದ ವೀರ ಯೋಧರು ಕಣ್ಮುಂದೆ ಬರ್ತಾರೆ. ಮೈ-ಮನಕ್ಕೆ ರಾಷ್ಟ್ರಪ್ರೇಮದ ಸಿಂಚನ ಬಡಿದೆಬ್ಬಿಸುತ್ತೆ, ಮನದಲ್ಲೇ ಒಮ್ಮೆ ಜೈಹಿಂದ್ ಅಂದುಬಿಡ್ತೀವಿ... ಅಷ್ಟರಮಟ್ಟಿಗೆ ಅಚ್ಚೊತ್ತಿದೆ ಕಾರ್ಗಿಲ್​ ಹೆಸರು.

ಹೌದು, 21 ವರ್ಷದ ಹಿಂದೆ ಅಂದರೆ 1999ರ ಜುಲೈ 26ರಂದು ಭಾರತೀಯರು ಕಾರ್ಗಿಲ್​ ಯುದ್ಧವನ್ನು ಗೆದ್ದು ಬೀಗಿದ ದಿನ. ಕಾರ್ಗಿಲ್​ ಜಿಲ್ಲೆಯಲ್ಲಿ ಎಲ್​ಒಸಿ(ಲೈನ್​ ಆಫ್​ ಕಂಟ್ರೋಲ್​) ಮೂಲಕ ಒಳ ನುಸುಳಿದ್ದ ಪಾಕಿಸ್ತಾನದ ಸೈನಿಕರು ಮತ್ತು ಉಗ್ರರನ್ನು ಸದೆಬಡಿದ ಭಾರತೀಯ ಸೈನ್ಯ ವಿಜಯದ ಪತಾಕೆ ಹಾರಿಸಿತ್ತು. ಈ ಹೋರಾಟದಲ್ಲಿ ಹುತಾತ್ಮರಾದ ಭಾರತೀಯ ವೀರಯೋಧರ ಸ್ಮಾರಕವೂ ಕಾರ್ಗಿಲ್​ನಲ್ಲಿಯೇ ಇದೆ. ಇಂತಹ ಭೂಮಿಯ ಮಣ್ಣನ್ನು ಲೆಫ್ಟಿನೆಂಟ್ ಕರ್ನಲ್ ಅಮರನಾಥ್ ಅವರು ಕರ್ನಾಟಕಕ್ಕೆ ತರುತ್ತಿದ್ದಾರೆ. ಯಾಕೆ ಗೊತ್ತಾ?

ಕೋಲಾರದಲ್ಲಿ ಯೋಧರ ಸ್ಮಾರಕ ನಿರ್ಮಾಣ ಆಗುತ್ತಿದೆ. ಈ ಜಿಲ್ಲೆಯ ಮಾಜಿ ಯೋಧರ ಬಹುದಿನಗಳ‌‌ ಕನಸು ಇಲ್ಲೊಂದು ಯೋಧರ ಸ್ಮಾರಕ‌ ಕಟ್ಟಬೇಕು. ಈ ಕಾರ್ಯಕ್ಕೆ ಕಾರ್ಗಿಲ್​ ಯುದ್ಧಭೂಮಿಯ ಮಣ್ಣು ಬೇಕು ಎಂಬುದು. ಅದರಂತೆ ನಗರದ ಪಿ.ಸಿ. ಬಡಾವಣೆಯ ಮಕ್ಕಳ ಉದ್ಯಾನವನದ ಬಳಿ ಸ್ಮಾರಕ ನಿರ್ಮಾಣವಾಗುತ್ತಿದೆ. ಈ ಕಾರ್ಯಕ್ಕೆ ಆ.15ರಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್. ನಾಗೇಶ್ ಚಾಲನೆ ನೀಡಿದ್ದರು.

ಇನ್ನು ಕೋಲಾರದ ಮಾಜಿ ಸೈನಿಕರ ಆಸೆಯಂತೆ ಕಾರ್ಗಿಲ್ ಯುದ್ಧ ಭೂಮಿಯ ಮಣ್ಣನ್ನು ಲೆಫ್ಟಿನೆಂಟ್ ಕರ್ನಲ್ ಅಮರನಾಥ್ ತರುತ್ತಿದ್ದಾರೆ. ಅಲ್ಲಿನ ಮಣ್ಣನ್ನು ಒಂದು ಕವರ್​ನಲ್ಲಿ ತುಂಬಿಸಿಕೊಂಡಿರುವ ವಿಡಿಯೋ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗಿದೆ.