ನ್ಯೂಸ್

ಮೊದಲು ನೀನು ಮಾಡಿ ತೋರಿಸು ... ಹಾಗಂತ ಅರ್ಜುನ್‌ಗೆ ಕರೀನಾ ಸವಾಲು ಹಾಕಿದ್ದು ಯಾಕೆ?

ಕರೀನಾ ಕಪೂರ್ ಖಾನ್ ಮುಂಚಿನಿಂದಲೂ ತಮ್ಮ ಖಡಕ್ ಹೇಳಿಕೆಗಳಿಗೆ ಜನಪ್ರಿಯರು. ನೇರ ಮತ್ತು ನಿಷ್ಠುರವಾಗಿ ಮಾತನಾಡುವ ಕರೀನಾ ಅವರನ್ನು ಮೆಚ್ಚುವವರ ಸಂಖ್ಯೆ ಸಹ ಬಾಲಿವುಡ್‌ನಲ್ಲಿ ಕಡಿಮೆಯೇ ಎಂದು ಹೇಳಲಾಗುತ್ತದೆ. ಇಷ್ಟೊಂದು ಪ್ರಸಿದ್ಧರಾಗಿರುವ ಕರೀನಾ, ಈಗ ಅರ್ಜುನ್ ಕಪೂರ್ ಅವರಿಗೆ ಖಡಕ್ ಸವಾಲು ಹಾಕುವ ಮೂಲಕ ಸುದ್ದಿಯಲ್ಲಿದ್ದಾರೆ.

ಅರ್ಜುನ್ ಕಪೂರ್ ಮತ್ತು ಕರೀನಾ ಕಪೂರ್ ಇಬ್ಬರೂ ‘ಕೀ ಆ್ಯಂಡ್ ಕಾ’ ಎಂಬ ಚಿತ್ರದಲ್ಲಿ ನಾಯಕ-ನಾಯಕಿಯಾಗಿ ಅಭಿನಯಿಸಿದ್ದರು. ಈ ಚಿತ್ರದಲ್ಲಿ ಅರ್ಜುನ್ ಕಪೂರ್ ಹೌಸ್ ಹಸ್ಬೆಂಡ್ ಆಗಿ ಕಾಣಿಸಿಕೊಂಡಿದ್ದರು. ಈಗ ಅರ್ಜುನ್ ಚಿತ್ರ ಬಿಡುಗಡೆಯಾದ ನಾಲ್ಕನೇ ಆ್ಯನಿವರ್ಸರಿ ಸಂದರ್ಭದಲ್ಲಿ, ಸೋಷಿಯಲ್ ಮೀಡಿಯಾದಲ್ಲೊಂದು ಪೋಸ್ಟ್ ಹಾಕಿದ್ದರು.

‘ಪ್ರೀತಿಯ ‘ಕೀ’ ಮತ್ತು ‘ಕಾ’ಗಳೇ. ಮನೆಯಲ್ಲೇ ಸೇಫ್​ ಆಗಿದ್ದೀರೆಂದು ನಂಬಿದ್ದೇನೆ. ಬಹುಶಃ ‘ಕಾ’ಗಳೆಲ್ಲಾ ‘ಕೀ’ಗಳೊಂದಿಗೆ ಮನೆಯ ಕೆಲಸಗಳನ್ನು ಹಂಚಿಕೊಳ್ಳುತ್ತಿರಬಹುದು. ಹಾಗೆ ‘ಕಾ’ಗಳೆಲ್ಲಾ ಮನೆಯ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರೆ, ನನಗೆ ನಿಮ್ಮ ವಿಡಿಯೋಗಳನ್ನು ಕಳಿಸಿ’ ಎಂದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದರು.

ಇದಕ್ಕೆ ಪ್ರತಿಕ್ರಯಿಸಿರುವ ಕರೀನಾ, ‘ಮೊದಲು ನೀನು ಮನೆ ಕೆಲಸಗಳನ್ನು ಮಾಡುತ್ತಿದ್ದೀಯಾ ಹೇಳು. ಮಾಡುತ್ತಿಲ್ಲ ಎಂದರೆ ಮೊದಲು ಮಾಡಿ ತೋರಿಸು. ಆಗ ಬೇರೆ ‘ಕಾ’ಗಳು ನಿನ್ನನ್ನ ಫಾಲೋ ಮಾಡುತ್ತಾರೆ’ ಎಂದು ಉತ್ತರ ಕೊಟ್ಟಿದ್ದಾರೆ. ಕರೀನಾ ಅವರ ಉತ್ತರ ನೋಡಿ ದಂಗಾಗಿರುವ ಅರ್ಜುನ್, ಡನ್ ಎಂದು ಹೇಳಿದ್ದು ಬಿಟ್ಟರೆ, ಮತ್ತೇನೂ ಪ್ರತಿಕ್ರಯಿಸಿಲ್ಲ. ಬಹುಶಃ ಮನೆ ಕೆಲಸ ಮಾಡಿಯೇ ಕರೀನಾ ಬಾಯಿ ಮುಚ್ಚಿಸುತ್ತಾರಾ ಎಂಬ ಕುತೂಹಲ ಎಲ್ಲರಿಗೂ ಇದೆ.

ಇದನ್ನು ಓದಿ ಕರೀನಾ ಮತ್ತು ಅರ್ಜುನ್ ನಡುವೆ ಸಮರ ಏರ್ಪಟ್ಟಿದೆ ಎಂಬ ತೀರ್ಮಾನಕ್ಕೆ ಬಂದುಬಿಟ್ಟೀರಿ ಜೋಕೆ. ಹಾಗೇನಿಲ್ಲ. ಇಬ್ಬರೂ ಒಳ್ಳೆಯ ಸ್ನೇಹಿತರು. ಅದಕ್ಕಿಂತ ಹೆಚ್ಚಾಗಿ ದೂರದ ಸಂಬಂಧಿಕರು. ಆ ಸ್ನೇಹದಲ್ಲೇ ಆಗಾಗ ಸವಾಲ್-ಜವಾಬ್‌ಗಳು ನಡೆಯುವುದುಂಟು.