ಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಅವರ ಪುಸ್ತಕದ ಶೀರ್ಷಿಕೆಯಿಂದಾಗಿ ನಟಿಗೆ ಮಧ್ಯಪ್ರದೇಶ ಹೈಕೋರ್ಟ್ ಕೋರ್ಟ್ ನೋಟಿಸ್ ನೀಡಿದೆ.
ಕರೀನಾ ಕಪೂರ್ ಖಾನ್ ತನ್ನ ಪುಸ್ತಕವೊಂದರಲ್ಲಿ ತನ್ನ ಗರ್ಭಾವಸ್ಥೆಯ ಪ್ರಯಾಣವನ್ನು ಹಂಚಿಕೊಂಡಿದ್ದಾರೆ. ಅದಕ್ಕೆ ಅವರು ‘ಕರೀನಾ ಕಪೂರ್ ಖಾನ್‌ರ ಪ್ರೆಗ್ನೆನ್ಸಿ ಬೈಬಲ್’ ಎಂದು ಹೆಸರಿಸಿದ್ದಾರೆ.
ಜಬಲ್ಪುರದ ಕ್ರಿಶ್ಚಿಯನ್ ಸಾಮಾಜಿಕ ಕಾರ್ಯಕರ್ತರೊಬ್ಬರು ಪುಸ್ತಕದ ಹೆಸರಿನಲ್ಲಿ ‘ಬೈಬಲ್’ ಎಂಬ ಪದದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದರು. ಜಬಲ್‌ಪುರದ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಸಾಮಾಜಿಕ ಕಾರ್ಯಕರ್ತ ಕ್ರಿಸ್ಟೋಫರ್ ಆಂಥೋನಿ, ಕರೀನಾ ಕಪೂರ್ ಪುಸ್ತಕವನ್ನು ಫೇಮಸ್ ಮಾಡೋಕೆ ಮಾತ್ರ ಕ್ರಿಶ್ಚಿಯನ್ ಧರ್ಮದ ಪವಿತ್ರ ಪುಸ್ತಕದ ಹೆಸರನ್ನು ಶೀರ್ಷಿಕೆಯಲ್ಲಿ ತೆಗೆದುಕೊಂಡಿದ್ದಾರೆ. ಈ ಮೂಲಕ ಪಬ್ಲಿಸಿಟಿ ಗಳಿಸಲು ಚೀಪ್ ಗಿಮಿಕ್ ಮಾಡಿದ್ದಾರೆ.
ಬೈಬಲ್ ಪ್ರಪಂಚದಾದ್ಯಂತ ಕ್ರಿಶ್ಚಿಯನ್ ಧರ್ಮದ ಪವಿತ್ರ ಪುಸ್ತಕವಾಗಿದೆ. ಕರೀನಾ ಕಪೂರ್ ಖಾನ್ ಅವರ ಗರ್ಭಧಾರಣೆಯನ್ನು ಬೈಬಲ್‌ನೊಂದಿಗೆ ಹೋಲಿಸುವುದು ತಪ್ಪು ಎಂದು ಅವರು ಹೇಳಿದ್ದಾರೆ. ಇದರಿಂದ ಅವರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದಿದ್ದಾರೆ.
ಹೈಕೋರ್ಟ್ ನ್ಯಾಯಮೂರ್ತಿ ಗುರ್ಪಾಲ್ ಸಿಂಗ್ ಅಹ್ಲುವಾಲಿಯಾ ಅವರು ಚಲನಚಿತ್ರ ನಟಿ ಮತ್ತು ಲೇಖಕಿ ಕರೀನಾ ಕಪೂರ್ ಖಾನ್ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಇದಕ್ಕೆ ಉತ್ತರ ಕೇಳಿದ್ದಾರೆ.