ರಾಣೆಬೆನ್ನೂರ: ಬೆಳಗಾವಿಯ ಕೆಎಸ್ಆರ್ಟಿಸಿಬಸ್ ನಿರ್ವಾಹಕ ಮೇಲಿನ ಹಲ್ಲೆ ಮಾಡಿರುವುದನ್ನು ಖಂಡಿಸಿ ಹಾಗೂ ಎಂಇಎಸ್ ಸಂಘಟನೆ ನಿಷೇಧಿಸಲು ಆಗ್ರಹಿಸಿ ಇಲ್ಲಿಯ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಟಕದ ವತಿಯಿಂದ ನಗರದ ಮಿನಿ ವಿಧಾನಸೌಧ ಎದುರು ಉಪ ತಹಸೀಲ್ದಾರ್ ಶ್ಯಾಮಸುಂದರ ಗೊರವರ ಮೂಲಕ ಸೋಮವಾರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸಂಟನೆಯ ತಾಲೂಕು ಅಧ್ಯಕ್ಷ ಚಂದ್ರಪ್ಪ ಬಣಕಾರ ಮಾತನಾಡಿ, ಕಳೆದ ಎರಡು ದಿನಗಳ ಹಿಂದೆ ಕೆಎಸ್ಆರ್ಟಿಸಿ ಬಸ್ ನಿರ್ವಾಹಕ ಮಹದೇವ ಅವರಿಗೆ ಬೆಳಗಾವಿಯಲ್ಲಿ ಕನ್ನಡದಲ್ಲಿ ಮಾತನಾಡಿ ಎಂದು ಹೇಳಿದಕ್ಕೆ ಕೆಲ ಮಾರಾಠಿ ಯುವಕರು ಸೇರಿ ಹಲ್ಲೆ ನಡೆಸಿದ್ದಲ್ಲದೆ ಲೈಂಗಿಕ ಕಿರುಕುಳ ಆರೋಪದಡಿ ಪೋಕ್ಸೋ ಕಾಯ್ದೆಯಲ್ಲಿ ಪ್ರಕರಣ ದಾಖಲು ಮಾಡಿ ದೌರ್ಜನ್ಯ ಎಸಗಿದ್ದಾರೆ.
ಇದಲ್ಲದೆ ಗಡಿನಾಡ ಬಸ್ಗಳ ಮೇಲೆ ಕೇಸರಿ ಧ್ವಜ ಹಾರಿಸಿ ಎಂಇಎಸ್ ಎಂದು ಬರೆದು ಅಟ್ಟಹಾಸ ಮೆರೆದಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ರಾಜ್ಯದಲ್ಲಿ ಎಂಇಎಸ್ ಘಟನೆಯನ್ನು ಸಂರ್ಪೂಣ ನಿಷೇಧಿಸಬೇಕು. ನಿರ್ವಾಹಕನ ಮೇಲೆ ಹಲ್ಲೆ ಮಾಡಿರುವ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಮಲ್ಲಿಕಾರ್ಜುನ ಸಾವಕ್ಕಳವರ, ಶ್ರೀಧರ ಚಲವಾದಿ, ಪರಶುರಾಮ ಕುರುವತ್ತಿ, ರಿಯಾಜ್ ದೊಡ್ಡಮನಿ, ಸಿದ್ದಪ್ಪ ಕೊಡೇರ, ಬಸವರಾಜ ರೊಡ್ಡನವರ, ಸಿದ್ದಪ್ಪ ದೊಡ್ಡಸಿದ್ದಪ್ಪನವರ, ಗಣೇಶ ಅಂಗಡಿ ಮತ್ತಿತರರು ಇದ್ದರು.