ನ್ಯೂಸ್

ನಾವೂ ಕರಸೇವಕರು ನಮ್ಮನ್ನೂ ಬಂಧಿಸಿ

Davangere - Desk - Basavaraja P

ಹೊನ್ನಾಳಿ: ಹುಬ್ಬಳಿಯ ಕರಸೇವಕನ ಬಂಧನ ಖಂಡಿಸಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ತಾಲೂಕು ಬಿಜೆಪಿ ಘಟಕದ ಪದಾಧಿಕಾರಿಗಳು ‘ನಾವೂ ಕರಸೇವಕರು ನಮ್ಮನ್ನೂ ಬಂಧಿಸಿ’ ಎನ್ನುವ ಪೋಸ್ಟರ್ ಹಿಡಿದು ಘೋಷಣೆ ಕೂಗಿ ಶನಿವಾರ ಪ್ರತಿಭಟನೆ ನಡೆಸಿದರು.

ಪಾದಯಾತ್ರೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಬಂಧನ, ಬಿಡುಗಡೆ: ಪಟ್ಟಣದ ಕನಕ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ನಂತರ ಕರಸೇವಕರನ್ನು ಬಂಧಿಸಿದಂತೆ ನಮ್ಮನ್ನೂ ಬಂಧಿಸಿ ಎಂಬ ಘೋಷವಾಕ್ಯದೊಂದಿಗೆ ವೃತ್ತ ಪೊಲೀಸ್ ಕಚೇರಿಗೆ ಆಗಮಿಸಿ, ಮುತ್ತಿಗೆ ಹಾಕಿದರು.

ನೂರಾರು ಕಾರ್ಯಕರ್ತರು ಪೊಲೀಸ್ ಕಚೇರಿಗೆ ಮುತ್ತಿಗೆ ಹಾಕಲು ಮುನ್ನುಗ್ಗುತ್ತಿದ್ದಂತೆ ಪೊಲೀಸರು ಮತ್ತು ರೇಣುಕಾಚಾರ್ಯ ನಡುವೆ ವಾಗ್ವಾದ ಸೃಷ್ಟಿಯಾಯಿತು. ಪ್ರತಿಭಟನಾಕಾರರನ್ನು ತಡೆಹಿಡಿಯಲು ಹರಸಾಹಸಪಟ್ಟ ಪೊಲೀಸರು ಮಾಜಿ ಸಚಿವ ರೇಣುಕಾಚಾರ್ಯ, ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ. ಸುರೇಶ್ ಮತ್ತಿತರರನ್ನು ಮುಂಜಾಗ್ರತೆ ಕ್ರಮವಾಗಿ ವಶಕ್ಕೆ ಪಡೆದು, ನಂತರ ಬಿಡುಗಡೆಗೊಳಿಸಿದರು.

ಇದಕ್ಕೂ ಮೊದಲು ಮಾಜಿ ಸಚಿವ ರೇಣುಕಾಚಾರ್ಯ ಮಾತನಾಡಿ, 1992ರಲ್ಲಿ ಕರಸೇವಕರಾಗಿದ್ದ ಶ್ರೀಕಾಂತ್‌ಪೂಜಾರಿಯನ್ನು ಹಳೇ ಕೇಸ್‌ನಲ್ಲಿ ವಿಚಾರಣೆಗೆ ಕರೆಸಿ ಪೊಲೀಸರು ಬಂಧಿಸಿದ್ದು, ರಾಜ್ಯದಲ್ಲಿ ರಕ್ಷಣಾ ಇಲಾಖೆ ಸಂಪೂರ್ಣ ಕಾಂಗ್ರೆಸ್ ಕೈಗೊಂಬೆಯಾಗಿ ವರ್ತಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಭ್ರಷ್ಟ ಹಾಗೂ ಹಿಂದು ವಿರೋಧಿ ಸರ್ಕಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಿಂದು ಯುವಕರನ್ನು ಟಾರ್ಗೆಟ್ ಮಾಡುತ್ತಿದ್ದು, ಒಬ್ಬ ಶ್ರೀಕಾಂತ್ ಪೂಜಾರಿಯನ್ನು ಬಂಧಿಸಬಹುದು, ಈ ರಾಜ್ಯದ ಎಲ್ಲ ಹಿಂದುಗಳನ್ನು ಬಂಧಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಒಬ್ಬ ಕರಸೇವಕನ್ನು ಬಂಧಿಸುವುದಲ್ಲ, ನಿಮಗೆ ತಾಕತ್ ಇದ್ದರೆ ನಮ್ಮನ್ನೂ ಬಂಧಿಸಿ. ಕಾಂಗ್ರೆಸ್‌ನವರು ಶ್ರೀರಾಮ ಭಕ್ತರನ್ನು ಕ್ರಿಮಿನಲ್ ಎನ್ನುತ್ತಿದ್ದಾರೆ. ಕುಕ್ಕರ್ ಬ್ಲಾಸ್ಟ್ ಮಾಡಿದವರು ಅಮಾಯಕರು ಎನ್ನುತ್ತಾರೆ ಇದು ಯಾವ ನ್ಯಾಯ? ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ತುಘಲಕ್ ಆಡಳಿತ ನಡೆಸುತ್ತಿದೆ. ಅಯೋಧ್ಯೆಯಲ್ಲಿ ಭವ್ಯವಾಗಿ ರಾಮಮಂದಿರ ಕಟ್ಟಲಾಗಿದೆ ಎಂಬ ಹೊಟ್ಟೆಹುರಿಯಿಂದ ಕಾಂಗ್ರೆಸ್‌ನವರು ಈ ರೀತಿ ವರ್ತಿಸುತ್ತಿದ್ದಾರೆ. ಆದರೆ, ಅಯೋಧ್ಯೆಗೆ ಹೋಗುವವರನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದರು.

ಪ್ರತಿಭಟನೆಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ. ಸುರೇಶ್, ನೆಲಹೊನ್ನೆ ಮಂಜುನಾಥ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ತರಗನಹಳ್ಳಿ ರಮೇಶ್, ಬೆನಕನಹಳ್ಳಿ ಮಹೇಂದ್ರಗೌಡ, ಮಾರುತಿನಾಯ್ಕ, ಮುಕ್ತೆನಹಳ್ಳಿ ಕನಕದಾಸ, ಕುಳಗಟ್ಟೆ ರಂಗಪ್ಪ, ಎಸ್.ಎಸ್.ಬೀರಪ್ಪ, ಕರಿಬಸಪ್ಪ, ಜಿಂಜ್ಯಾನಾಯ್ಕ, ಕೆ.ವಿ.ಶ್ರೀಧರ, ಶಿವಾನಂದ್, ಮಹೇಶ್‌ಹುಡೇದ್ ಇತರರು ಇದ್ದರು.