ರಂಗಭೀಷ್ಮ ಬಿ.ವಿ.ಕಾರಂತರ ಜನ್ಮದಿನದ ಅಂಗವಾಗಿ ಶಿವಮೊಗ್ಗ ರಂಗಾಯಣ ನಿರ್ದೇಶಕ ಪ್ರಸನ್ನ ಡಿ. ಸಾಗರ, ಆಡಳಿತಾಧಿಕಾರಿ ಡಾ. ಎ.ಸಿ.ಶೈಲಜಾ, ರಂಗಕರ್ಮಿ ಕಾಂತೇಶ ಕದರಮಂಡಲಗಿ ಪೋಸ್ಟರ್ ಬಿಡುಗಡೆ ಮಾಡಿದರು. 
ನ್ಯೂಸ್

21ರಿಂದ ಕಾರಂತರ ಸ್ಮರಣಾರ್ಥ ನಾಟಕೋತ್ಸವ

ಶಿವಮೊಗ್ಗ: ಶಿವಮೊಗ್ಗ ರಂಗಾಯಣವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ರಂಗಭೀಷ್ಮ ಬಿ.ವಿ.ಕಾರಂತರ ಜನ್ಮದಿನದ ನೆನಪಿನಲ್ಲಿ ಮೂರು ದಿನಗಳ ನಾಟಕೋತ್ಸವವನ್ನು ಸೆ.21ರಿಂದ 23ರವರೆಗೆ ಪ್ರತಿದಿನ ಸಂಜೆ 6.30ಕ್ಕೆ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಂಡಿದೆ ಎಂದು ರಂಗಾಯಣದ ನಿರ್ದೇಶಕ ಪ್ರಸನ್ನ ಡಿ. ಸಾಗರ ಹೇಳಿದರು.

ಸೆ.21ರಂದು ರಂಗಕರ್ಮಿ ಮಹಾಂತೇಶ್ ಗಜೇಂದ್ರಗಡ ನಾಟಕೋತ್ಸವ ಉದ್ಘಾಟಿಸಲಿದ್ದು, ರಂಗಸಮಾಜದ ಸದಸ್ಯ ರಾಜಪ್ಪ ದಳವಾಯಿ, ಶಿವಮೊಗ್ಗ ರಂಗಾಯಣ ಆಡಳಿತಾಧಿಕಾರಿ ಡಾ. ಎ.ಸಿ.ಶೈಲಜಾ ಭಾಗವಹಿಸುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಉದ್ಘಾಟನಾ ಸಮಾರಂಭದ ನಂತರ ಬೆಂಗಳೂರಿನ ಸುಸ್ಥಿರ ಪ್ರತಿಷ್ಠಾನ ಪ್ರಸ್ತುತ ಪಡಿಸುವ ಜೋಸ್ೆ ಜಾನ್ ನಿರ್ದೇಶನದ ಸರಸ- ವಿರಸ- ಸಮರಸ ನಾಟಕ ಪ್ರದರ್ಶನವಾಗಲಿದೆ. 22ರಂದು ಧಾರವಾಡದ ಆಟಮಾಟ ಸಾಂಸ್ಕೃತಿಕ ಪಥ ಪ್ರಸ್ತುತ ಪಡಿಸುವ ಮಹಾದೇವ ಹಡಪದ ಅವರ ರಂಗರೂಪ ಮತ್ತು ಪರಿಕಲ್ಪನೆಯ ವಿಶ್ವರಾಜ ರಾಜಗುರು ಅಭಿನಯದ ನಾ ರಾಜಗುರು ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
23ರಂದು ಒಡ್ಡೋಲಗ ರಂಗಪರ್ಯಟನ ಹಿತ್ಲಕೈ ಪ್ರಸ್ತುತಿ ಮತ್ತು ಗಣಪತಿ ಬಿ. ಹಿತ್ಲಕೈ ನಿರ್ದೇಶನದ ವಿವೇಕ ಶಾನಭೋಗ ರಚನೆಯ ಬಹುಮುಖಿ ನಾಟಕ ಪ್ರದರ್ಶನಗೊಳ್ಳಲಿದೆ. ನಾಟಕೋತ್ಸವದಲ್ಲಿ ಪ್ರದರ್ಶವಾಗುವ ಪ್ರತಿ ನಾಟಕಕ್ಕೆ 30 ರೂ. ಪ್ರವೇಶ ಶುಲ್ಕವಿದೆ ಎಂದು ಹೇಳಿದರು.
ರಂಗಾಯಣವು ಜನ ರಂಗಾಯಣವಾಗಬೇಕು. ತಾವು ಅಧಿಕಾರ ವಹಿಸಿಕೊಂಡ ಬಳಿಕ ಹೊಸ ಪ್ರಯೋಗಗಳನ್ನು ಮಾಡುವ ಚಿಂತನೆ ನಡೆದಿದೆ. ವೃತ್ತಿ ಹಾಗೂ ಹವ್ಯಾಸಿ ರಂಗ ತಂಡಗಳ ನಡುವಿನ ಅಂತರವನ್ನು ಕಡಿಮೆ ಮಾಡಬೇಕಿದೆ. ಜನರು ಹೆಚ್ಚು ಹೆಚ್ಚು ನಾಟಕಗಳನ್ನು ನೋಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಸರ್ಕಾರದಿಂದ ಹೆಚ್ಚಿನ ಅನುದಾನ ನಿರೀಕ್ಷಿಸಲಾಗಿದೆ. ರಂಗಾಸಕ್ತರಿಂದ ದೇಣಿಗೆ ಬೆಂಬಲವನ್ನೂ ಅಪೇಕ್ಷಿಸುತ್ತೇವೆ ಎಂದರು. ರಂಗಾಯಣದ ಆಡಳಿತಾಧಿಕಾರಿ ಡಾ. ಎ.ಸಿ.ಶೈಲಜಾ, ರಂಗಕರ್ಮಿ ಕಾಂತೇಶ ಕದರಮಂಡಲಗಿ ಸುದ್ದಿಗೋಷ್ಠಿಯಲ್ಲಿದ್ದರು.