ನ್ಯೂಸ್

ರಾಜ್ಯದಲ್ಲಿ ಕೋವಿಡ್​ 19 ಸೋಂಕಿತರ ಸಂಖ್ಯೆ 175ಕ್ಕೆ ಏರಿಕೆ, ಮಂಗಳವಾರ ಒಟ್ಟು 12 ಹೊಸ ಪ್ರಕರಣಗಳು ದಾಖಲು

ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ ಕೋವಿಡ್​ 19 ಸೋಂಕಿತರ ಸಂಖ್ಯೆ 175ಕ್ಕೆ ಏರಿಕೆಯಾಗಿದೆ. ಮಂಗಳವಾರ ಒಟ್ಟು 12 ಪ್ರಕರಣಗಳು ಪತ್ತೆಯಾಗಿವೆ.

ಬೆಂಗಳೂರು ನಗರ ಮತ್ತು ಮಂಡ್ಯದಲ್ಲಿ ತಲಾ ಮೂರು, ಬಾಗಲಕೋಟೆ ಮತ್ತು ಕಲಬುರಗಿಯಲ್ಲಿ ತಲಾ ಎರಡು ಮತ್ತು ಗದಗ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತಲಾ ಒಂದೊಂದು ಹೊಸ ಪ್ರಕರಣಗಳು ಪತ್ತೆಯಾಗಿವೆ.

ಗದಗದಲ್ಲಿ ಒಬ್ಬ ಮಹಿಳೆಗೆ ಕರೊನಾ ವೈರಸ್​ ಸೋಂಕು ತಗುಲಿದ್ದು, ಮೂರನೇ ಹಂತದ ಹರಡುವಿಕೆಯ ಶಂಕೆ ವ್ಯಕ್ತವಾಗಿದೆ. ಈ ಮಹಿಳೆ ಯಾವುದೇ ವಿದೇಶ ಅಥವಾ ನವದೆಹಲಿಗೆ ಪ್ರಯಾಣಿಸಿದ ಹಿನ್ನೆಲೆ ಹೊಂದಿಲ್ಲದೇ ಇರುವುದು ಈ ಅನುಮಾನಕ್ಕೆ ಕಾರಣವಾಗಿದೆ.

ಇದೇ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 25 ಮಂದಿ ಕೋವಿಡ್​ 19 ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಒಟ್ಟು ನಾಲ್ವರು ಸೋಂಕಿನಿಂದ ಸತ್ತಿರುವುದಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ತಿಳಿಸಿದೆ.