ನ್ಯೂಸ್

ಕರಗ ಪಲ್ಲಕ್ಕಿ ಉತ್ಸವ; ವಿದ್ಯುತ್ ಪ್ರವಹಿಸಿ ಇಬ್ಬರ ದುರ್ಮರಣ

ಬೆಂಗಳೂರು: ವಿದ್ಯುತ್ ತಂತಿಯಿಂದ ಕರಗ ಪಲ್ಲಕ್ಕಿಯನ್ನು ತಪ್ಪಿಸಲು ಹೋದ ಇಬ್ಬರಿಗೆ ವಿದ್ಯುತ್ ಪ್ರವಹಿಸಿ ಪ್ರಾಣ ಕಳೆದುಕೊಂಡಿದ್ದಾರೆ.

ವೀರಸಂದ್ರ ನಿವಾಸಿ ರಂಗನಾಥ್ (33) ಮತ್ತು ಜಿಗಣಿಯ ಹರಿಬಾಬು (25) ಮೃತರು. ಗೊಲ್ಲಹಳ್ಳಿ ಬಳಿ ಭಾನುವಾರ ಮುಂಜಾನೆ 5.30ಕ್ಕೆ ದುರ್ಘಟನೆ ಸಂಭವಿಸಿದೆ. ಈ ಇಬ್ಬರು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ರಾತ್ರಿ ಗೊಲ್ಲಹಳ್ಳಿಯಲ್ಲಿ ಕರಗ ಉತ್ಸವ ಇತ್ತು. ಈ ಹಿನ್ನೆಲೆ ಟ್ರ್ಯಾಕ್ಟರ್‌ನಲ್ಲಿ ಪಲ್ಲಕ್ಕಿ ಪ್ರತಿಷ್ಠಾಪಿಸಿ ವಿವಿಧ ಬಡಾವಣೆಗಳಲ್ಲಿ ಬೆಳಗಿನ ಜಾವವರೆಗೂ ಮೆರವಣಿಗೆ ಮಾಡಲಾಯಿತು. ಮುಂಜಾನೆ 5.30ಕ್ಕೆ ವಾಪಸ್ ಬರುವಾಗ ಪಲ್ಲಕ್ಕಿಗೆ ರಸ್ತೆಬದಿ ವಿದ್ಯುತ್ ತಂತಿ ತಾಕುತ್ತಿತ್ತು.

ಇದನ್ನು ಗಮನಿಸಿದ್ದ ರಂಗನಾಥ್ ಮತ್ತು ಹರಿಬಾಬು, ಮರ ಕೋಲಿನಿಂದ ತಂತಿಯನ್ನು ಮೇಲೆತ್ತಲು ಮುಂದಾದರು. ಆಗ ತಂತಿಗೆ ತಾಕಿದ್ದರಿಂದ ವಿದ್ಯುತ್ ಪ್ರವಹಿಸಿ ಇಬ್ಬರು ಅಸ್ವಸ್ಥರಾಗಿ ಕುಸಿದು ಬಿದ್ದಿದ್ದರು. ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು. ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು.

ಭಾನುವಾರ ರಂಗನಾಥ್ ಮತ್ತು ಹರಿಬಾಬು ಶವಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬ ಸದ್ಯರಿಗೆ ಹಸ್ತಾಂತರಿಸಿದರು. ಪ್ರಾಥಮಿಕ ತನಿಖೆಯಲ್ಲಿ ಟ್ರ್ಯಾಕ್ಟರ್ ಚಾಲಕ ಮತ್ತು ಆಯೋಜಕರ ನಿರ್ಲಕ್ಷ್ಯದಿಂದ ಅನಾಹುತ ಸಂಭವಿಸಿದೆ ಎಂಬುದು ಗೊತ್ತಾಗಿದೆ. ಆದರಿಂದ ಚಾಲಕ ಮತ್ತು ಆಯೋಜಕರು ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.