ಕಾಸರಗೋಡು : ಸಿಪಿಎಂ ಅಧೀನದಲ್ಲಿರುವ ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ನಡೆದಿರುವ ಭಾರಿ ವಂಚನೆ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳನ್ನು ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ. ಸಿಪಿಐ-ಎಂ ಮುಳ್ಳೇರಿಯ ಸ್ಥಳೀಯ ಸಮಿತಿ ಮಾಜಿ ಸದಸ್ಯ ಮತ್ತು ಬ್ಯಾಂಕ್ ಕಾರ್ಯದರ್ಶಿ ಕೆ. ರತೀಶನ್ ಮತ್ತು ಅವನ ಸ್ನೇಹಿತ ಜಬ್ಬಾರ್ ಬಂಧಿತರು. ತಮಿಳುನಾಡಿನ ನಾಮಕ್ಕಲ್‌ನ ವಸತಿಗೃಹವೊಂದರಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.
ಆರೋಪಿಗಳು ಮೊಬೈಲ್ ಬಳಸದಿರುವುದು ಪೊಲೀಸರ ತನಿಖೆಗೆ ಹಿನ್ನಡೆಯನ್ನುಂಟುಮಾಡಿತ್ತು. ರತೀಶನ ಸಂಬಂಧಿಕರು ಮತ್ತು ಸ್ನೇಹಿತರನ್ನು ಕೇಂದ್ರೀಕರಿಸಿ ಪೊಲೀಸರು ನಡೆಸಿದ ತನಿಖೆ ನಡೆಸುವ ಮೂಲಕ ನಾಮಕ್ಕಲ್ ವಸತಿಗೃಹದಲ್ಲಿ ತಲೆಮರೆಸಿಕೊಂಡು ವಾಸಿಸುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಕೆ.ರತೀಶನ್ ಸೊಸೈಟಿಗೆ 4.76 ಕೋಟಿ ರೂ. ವಂಚನೆ ನಡೆಸಿದ್ದಾನೆ.