ಬೆಂಗಳೂರು:
ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಲೋಕಸಭಾ ಚುನಾವಣೆ ಫಲಿತಾಂಶದ ಮೂಲಕ ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಭದ್ರ ಕೋಟೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದರು.
ಅರಮನೆ ಆವರಣದಲ್ಲಿ ಹೊಸದಾಗಿ ಆಯ್ಕೆಯಾಗಿರುವ ಎನ್‌ಡಿಎ ಸಂಸದರಿಗೆ ಏರ್ಪಡಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಲೋಕಸಭಾ ಚುನಾವಣೆಯಲ್ಲಿ 9 ಸಂಸದರು ಗೆದ್ದಿದ್ದಾರೆ ಎಂದು ಕಾಂಗ್ರೆಸ್ ಸಚಿವರುಗಳು, ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ತಿದ್ದಾರೆ. ಅತಿ ಹೆಚ್ಚು ಸಚಿವರು ಇರುವ ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿ ಗಳು ಲೀಡ್ ಪಡೆದು ಗೆದ್ದಿರುವುದು ಕಾಂಗ್ರೆಸ್ ದುರಾಡಳಿತಕ್ಕೆ ಸಾಕ್ಷಿ ಎಂದರು.
ತನ್ನ ವೈಫಲ್ಯ ಗಳನ್ನು ಮುಚ್ಚಿಕೊಳ್ಳಲು ಕೇಂದ್ರದ ಮೇಲೆ ಟೀಕೆ ಮಾಡ್ತಿದ್ದಾರೆ. ಮುಖ್ಯಮಂತ್ರಿಗಳೇ ಕೇಂದ್ರದ ಮೇಲೆ ಆರೋಪ ಮಾಡುತ್ತಿದ್ದಾರೆ. ಅನುಭವಿ ರಾಜಕಾರಣಿ ಆಗಿರುವ ಸಿದ್ದರಾಮಯ್ಯ, ಅನುದಾನಕ್ಕಾಗಿ ಕಾಯುವ ಸಿಎಂ? ಯಾವುದೋ ಬೋರ್ಡ್ ಚೇರ್‌ಮನ್ ರೀತಿ ಅನುದಾನಕ್ಕಾಗಿ ಕಾಯುವ ರೀತಿ ಅವರಿಗೆ ಶೋಭೆಯೇ ಎಂದು ಪ್ರಶ್ನಿಸಿದರು.
ನಾವು ಮಾತನಾಡುವುದು ಹಾಗಿರಲಿ. ಕಾಂಗ್ರೆಸ್ ಪಕ್ಷದ ಶಾಸಕರೇ ಅಭಿವೃದ್ಧಿಗೆ ಹಣ ಇಲ್ಲ ಅಂತಾ ರಾಜೀನಾಮೆ ಮಾತಾಡಿದ್ದಾರೆ. ಗ್ಯಾರಂಟಿ ನೆಪದಲ್ಲಿ ರಾಜ್ಯದ ಅಭಿವೃದ್ಧಿ ಮಾಡುತ್ತಿಲ್ಲ. ಬರಗಾಲದ ಸಂದರ್ಭ, ಕೇಂದ್ರದಿಂದ ಪರಿಹಾರ ಕೊಟ್ಟರು, ಜನರಿಗೆ ಸ್ಪಂಧಿಸಲಿಲ್ಲ. ಎಲ್ಲದರ ಮೇಲೂ ತೆರಿಗೆ ಜಾಸ್ತಿ ಮಾಡುವುದೇ ಇವರಿಗೆ ಕಯಾಲಿಯಾಗಿದೆ ಎಂದರು.
ಹಾಲಿನ ದರ ಜಾಸ್ತಿ ಮಾಡಿದ್ದಲ್ಲದೆ, ಪೆಟ್ರೋಲ್ , ಡೀಸೆಲ್ ಮೇಲೂ ದರ ಏರಿಕೆ ಮಾಡಿದ್ದಾರೆ. ಮುಂದೆ ನೀರಿನ ದರ, ಬಸ್ ಹೆಚ್ಚಳವಂತೆ. ರಾಜ್ಯದಲ್ಲಿರುವುದು ಬಡವರ ಪರವಾದ ಸರ್ಕಾರ ಅಲ್ಲ. ಬಡವರ, ರೈತ ವಿರೋಧಿ ಸರ್ಕಾರ ಎಂದು ಟೀಕಿಸಿದರು.
ಜನ ಸಾಮಾನ್ಯರ ಮೇಲೆ ಬರೆ ಎಳೆಯುತ್ತಿರುವುದರ ವಿರುದ್ದ ಮುಂದೆ ಹೋರಾಟ ನಡೆಸಲಾಗುವುದು. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆ ನಮ್ಮ ಕಾರ್ಯಕರ್ತರಿಗೆ ಶಕ್ತಿ ತುಂಬುವ ಚುನಾವಣೆ ಆಗಲಿದ್ದು, ಅದಕ್ಕಾಗಿ ನಮ್ಮೆಲ್ಲ ಮುಖಂಡರು ಅವರಿಗೆ ಬಲ ತುಂಬಬೇಕು ಎಂದು ಕರೆ ನೀಡಿದರು.
ಇನ್ನೇನು ಅಧಿವೇಶನ ಕೂಡ ಬರುತ್ತಿದೆ. ಜೆಡಿಎಸ್ ಜೊತೆ ಸೇರಿ ಈ ಸರ್ಕಾರ ಸೊಕ್ಕು ಮುರಿಯುವ ಕೆಲಸ ಮಾಡೋಣ. ವಿಧಾನಸಭೆ ಅಧಿವೇಶನ ಮುಗಿದ ಬಳಿಕ ರಾಜ್ಯಾದ್ಯಂತ ಪ್ರವಾಸ ಮಾಡಲಾಗುವುದು. ಚುನಾವಣೆಗೆ ಸದೃಢ ಹಾಗೂ ಪಕ್ಷ ಸಂಘಟನೆ ಬಲ ತುಂಬೋಣ ಎಂದರು.
ಕಾಂಗ್ರೆಸ್‌ನವರ ಟೊಳ್ಳು ಭರವಸೆಗಳು ಮತ್ತು ಮೋದಿ ಗ್ಯಾರಂಟಿ ನಡುವೆ 19 ಸೀಟುಗಳನ್ನು ಗೆದ್ದಿದ್ದೇವೆ. ರಾಜ್ಯದ ಜನರ ಋಣ ತೀರಿಸಬೇಕು ಎಂದು ಐವರಿಗೆ ಕೇಂದ್ರದಲ್ಲಿ ಮಂತ್ರಿ ಅವಕಾಶ ಕೊಟ್ಟಿದ್ದಾರೆ. ಸಚಿವರು, ಸಂಸದರ ಮೂಲಕ ರಾಜ್ಯಕ್ಕೆ ಏನೇನು ಆಗಬೇಕು ಎನ್ನುವ ವಿಮರ್ಶೆ ಮಾಡಿ ಕೆಲಸ ಮಾಡಬೇಕು ಎಂದರು.
ಹಿಂದೆ ದಿ.ಅನಂತ ಕುಮಾರ್ ಹಾಗೂ ಯಡಿಯೂರಪ್ಪ ಯಾವ ರೀತಿ ಹೋರಾಟ ಮಾಡಿ ಪಕ್ಷವನ್ನು ಅಧಿಕಾರ ತಂದರೊ ಅದೇ ರೀತಿ ನಾವೆಲ್ಲರೂ ಹೋರಾಟ ಮಾಡಿ, ಮುಂದೆ ಮತ್ತೊಮ್ಮೆ ದಕ್ಷಿಣ ಭಾರತದ ಹೆಬ್ಬಾಗಿಲು ಕರ್ನಾಟಕದಲ್ಲಿ ಬಿಜೆಪಿ ಯನ್ನು ಮತ್ತೆ ಅಧಿಕಾರಕ್ಕೆ ತರೋಣ ಎಂದು ಕರೆ ನೀಡಿದರು.