ನ್ಯೂಸ್

ಕಪ್ಪತಗುಡ್ಡದಲ್ಲಿ ಮಣ್ಣು ಸಂರಕ್ಷಣೆಗೆ ಸಂಕನೂರ ಆಗ್ರಹ; ಬಂದೋಬಸ್ತ್ ಮಾಡಿ ಕ್ರಮದ ಭರವಸೆ ನೀಡಿದ ಸಚಿವ

ಬೆಂಗಳೂರು:
ಗದಗ ಜಿಲ್ಲೆಯ ಕಪ್ಪತಗುಡ್ಡದಲ್ಲಿ ಕಬ್ಬಿಣ ಅಂಶವಿರುವ ಮಣ್ಣನ್ನು ಅಕ್ರಮವಾಗಿ ಸಾಗಿಸಲಾಗುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬಿಜೆಪಿಯ ಎಸ್.ವಿ.ಸಂಕನೂರು ಮೇಲ್ಮನೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಕಪ್ಪತಗುಡ್ಡದಲ್ಲಿನ ಮಹತ್ವತೆ ಬಗ್ಗೆ ವಿಜಯವಾಣಿ ಸರಣಿ ವರದಿ ಪ್ರಕಟಿಸಿದೆ. ಆದರೂ ಈ ಬಗ್ಗೆ ಕ್ರಮ ಆಗಿಲ್ಲ. ಕಪ್ಪತಗುಡ್ಡದಲ್ಲಿ ಮಣ್ಣನ್ನು ರಾತ್ರಿ ದರೋಡೆ ಮಾಡಲಾಗುತ್ತಿದೆ ಎಂದರು.
ನಾನು ಸಹ ಅಲ್ಲಿಗೆ ಎರಡು ಬಾರಿ ಹೋಗಿದ್ದೇನೆ. ಆದರೆ, ಪ್ರಯೋಜನವಾಗಿಲ್ಲ. ಕಪ್ಪತಗುಡ್ಡದಲ್ಲಿ ಕಾಯುವವರು ಯಾರು? ಎಂದು ಪ್ರಶ್ನಿಸಿದರು.
ಉತ್ತರ ನೀಡಿದ ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಈ ಬಗ್ಗೆ ಈಗಾಗಲೇ ಅರಣ್ಯ ಇಲಾಖೆಯಿಂದ ದೂರು ದಾಖಲು ಆಗಿದೆ. ನಮ್ಮ ಇಲಾಖೆಯಲ್ಲಿ ದೂರು ದಾಖಲಾಗಿಲ್ಲ. ಅರಣ್ಯ ಇಲಾಖೆಯವರು ಸೀಜ್ ಮಾಡಿರುವ ಮಣ್ಣನ್ನು ಪಾಪನಾಶಿ ಗ್ರಾಮದ ಬಳಿ ದಾಸ್ತಾನು ಮಾಡಲಾಗಿದೆ ಎಂದರು.
ಅಲ್ಲಿ ಕಬ್ಬಿಣ ಅಂಶವಿರುವ ಮಣ್ಣು ಲೂಟಿ ಆಗದಂತೆ ಬಂದೋ ಬಸ್ತ್ ಮಾಡಲಾಗುವುದು. ಈ ಬಗ್ಗೆ ಅರಣ್ಯ ಇಲಾಖೆ ಜೊತೆಗೆ ಸಭೆ ನಡೆಸುತ್ತೇವೆ ಎಂದರು.