ನ್ಯೂಸ್

Kantara Chapter 1 ಮಿಂಚಿನ ಓಟ: 9 ದಿನಗಳಲ್ಲಿ ವಿಶ್ವಾದ್ಯಂತ 509 ಕೋಟಿ ರೂ. ಗಳಿಕೆ!

Kantara Chapter 1: ಜಾಗತಿಕವಾಗಿ ತೆರೆಕಂಡ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ ‘ಕಾಂತಾರ ಚಾಪ್ಟರ್​ 1’ ಚಿತ್ರಕ್ಕೆ ಇದೀಗ ಎಲ್ಲೆಡೆಯಿಂದ ವಿಶೇಷ ಮನ್ನಣೆ ಲಭಿಸುತ್ತಿದೆ. ಸಿನಿಪ್ರೇಕ್ಷಕರಿಗೆ ರೋಮಾಂಚನಕಾರಿ ಅನುಭವವನ್ನು ನೀಡಿರುವ ರಿಷಬ್​, ನಮ್ಮ ನಾಡಿನ ಮಣ್ಣಿನ ಕಥೆಯನ್ನು ವಿಶ್ವಕ್ಕೆ ಪಸರಿಸಿರುವುದು ಚಿತ್ರದ ಗೆಲುವಿಗೆ ದೊಡ್ಡ ಸಾಕ್ಷಿಯಾಗಿ ನಿಂತಿದೆ. ಬ್ಲಾಕ್​ಬಸ್ಟರ್​ನತ್ತ ಸಾಗುತ್ತಿರುವ ಕಾಂತಾರ ಈಗ ಬಾಕ್ಸ್ ಆಫೀಸ್​ನಲ್ಲಿ ಕೇವಲ 9 ದಿನಕ್ಕೆ 509.75 ಕೋಟಿ ರೂ. ಗಳಿಸಿದೆ.

ಹೌದು, ವಿಶ್ವಾದ್ಯಂತ ಕಲೆಕ್ಷನ್ ಬಗ್ಗೆ ಹೇಳುವುದಾದರೆ, ರಿಷಭ್ ಶೆಟ್ಟಿ ಅವರ "ಕಾಂತಾರ ಅಧ್ಯಾಯ 1" 500 ಕೋಟಿ ಗಡಿ ದಾಟಿದೆ. ಒಂಬತ್ತನೇ ದಿನದ ಗಳಿಕೆಯ ನಂತರ, ಚಿತ್ರದ ವಿಶ್ವಾದ್ಯಂತ ಗಳಿಕೆ ಸುಮಾರು 509.75 ಕೋಟಿ ತಲುಪಿದೆ. ಚಿತ್ರದ ಗಳಿಕೆ ಸ್ಥಿರವಾಗಿ ಮುಂದುವರಿಯುತ್ತಿದೆ ಮತ್ತು ಇದು ಸುಲಭವಾಗಿ 700 ಕೋಟಿ ಗಡಿ ತಲುಪಬಹುದು ಎಂದು ಸಿನಿ ತಜ್ಞರ ಅಭಿಪ್ರಾಯವಾಗಿದೆ. ಅಲ್ಲದೆ, ಕೇವಲ 9 ದಿನಗಳಲ್ಲಿ 509.75 ಕೋಟಿ ಗಳಿಸಿರುವುದಾಗಿ ಕಾಂತಾರ ನಿರ್ಮಾಣ ಸಂಸ್ಥೆ ''ಹೊಂಬಾಳೆ ಫಿಲ್ಮಸ್​'' ಧೃಢಪಡಿಸಿದೆ.

9 ದಿನಗಳ ನಂತರ ಕಾಂತಾರ ಚಾಪ್ಟರ್​-1 ಭಾರತದಲ್ಲಿ ಸುಮಾರು 359.40 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ವಿಕ್ಕಿ ಕೌಶಲ್ ಅಭಿನಯದ ಹಿಂದಿಯ 'ಚಾವಾ' ಚಿತ್ರದ ನಂತರ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ 350 ಕೋಟಿ ರೂ.ಗಳ ಮೈಲಿಗಲ್ಲನ್ನು ದಾಟಿದ ಈ ವರ್ಷದ ಎರಡನೇ ಭಾರತೀಯ ಚಿತ್ರ ಇದಾಗಿದೆ. ಆದಾಗ್ಯೂ, ಕೇವಲ 9 ದಿನಗಳ ಕಲೆಕ್ಷನ್ ಅನ್ನು ನೋಡಿದರೆ, ಅದು 'ಚಾವಾ' ಗಿಂತ ಮುಂದಿದೆ. ವಿಕ್ಕಿ ಕೌಶಲ್ ಅಭಿನಯದ ಈ ಚಿತ್ರ 9 ದಿನಗಳಲ್ಲಿ 286.75 ಕೋಟಿ ರೂ.ಗಳನ್ನು ಗಳಿಸಿತ್ತು ಮತ್ತು ಅದರ ಜೀವಿತಾವಧಿಯ ಕಲೆಕ್ಷನ್ 601.54 ಕೋಟಿ ರೂ.ಗಳಾಗಿತ್ತು.

‘ಕಾಂತಾರ’ ತಾರಾಗಣ ‘ಕಾಂತಾರ ಚಾಪ್ಟರ್​ 1’ ಚಿತ್ರದಲ್ಲಿ ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ, ಜಯರಾಮ್, ಕಿಶೋರ್​, ರಾಕೇಶ್ ಪೂಜಾರಿ, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್ ಸೇರಿದಂತೆ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್​​ ಸಂಗೀತ ನೀಡಿದ್ದು, ಹೊಂಬಾಳೆ ಫಿಲ್ಮ್ಸ್​ ಬ್ಯಾನರ್​ನಡಿ ವಿಜಯ್ ಕಿರಂಗದೂರು ನಿರ್ಮಾಣ ಮಾಡಿದ್ದಾರೆ,(ಏಜೆನ್ಸೀಸ್)