ನ್ಯೂಸ್

‘ಕಾಂತಾರ ಚಾಪ್ಟರ್ 1’ ಸಿನಿಮಾದಲ್ಲಿ ಬಾಲಿವುಡ್​ ನಟ! ಗುಲ್ಶನ್ ದೇವಯ್ಯ ಯಾರು ಗೊತ್ತಾ?... Kantara Chapter 1

 ಬೆಂಗಳೂರು:  ( Kantara Chapter 1  ) ಸ್ಯಾಂಡಲ್​ವುಡ್​​ ನಟ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡುತ್ತಿರುವ ಬಹು ನೀರಿಕ್ಷಿತ ಸಿನಿಮಾ ‘ಕಾಂತಾರ ಚಾಪ್ಟರ್ 1’. ಈ ಸಿನಿಮಾದಲ್ಲಿ ಬಾಲಿವುಡ್​​ ನಟರೊಬ್ಬರು ಕಾಣಿಸಿಕೊಳ್ಳಲಿದ್ದಾರೆ ಎಂದು ಹೊಂಬಾಳೆ ಫಿಲ್ಮಂ ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಕನ್ನಡ ಮೂಲದ ಆದರೆ ಬಾಲಿವುಡ್​ನಲ್ಲಿ ಹೆಚ್ಚು ಪರಿಚಿತವಾಗಿರುವ ನಟ ಗುಲ್ಶನ್ ದೇವಯ್ಯ. ಇವರು ‘ಕಾಂತಾರ: ಚಾಪ್ಟರ್ 1’ (  Kantara Chapter 1 ) ಸಿನಿಮಾದಲ್ಲಿ ಕುಲಶೇಖರ ಹೆಸರಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಾಜನ ರೀತಿ ಪೋಷಾಕು ಧರಿಸಿ ಸಿಂಹಾಸನದ ಮೇಲೆ ಕುಳಿತಿರುವ ಗುಲ್ಶನ್ ದೇವಯ್ಯ . ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ.

ಈ ಚಿತ್ರವು ಅಕ್ಟೋಬರ್ 2, 2025 ರಂದು ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ, ಬಂಗಾಳಿ ಮತ್ತು ಇಂಗ್ಲಿಷ್ ಸೇರಿದಂತೆ ಬಹು ಭಾಷೆಗಳಲ್ಲಿ ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

ಗುಲ್ಶನ್ ದೇವಯ್ಯ ಯಾರು ಗೊತ್ತಾ?:

ಬೆಂಗಳೂರಿನಲ್ಲಿ ಮಾಡೆಲಿಂಗ್ ಮಾಡುತ್ತಿದ್ದ ಗುಲ್ಷನ್ ದೇವಯ್ಯ ಪ್ರಸಾದ್ ಬಿದಪ್ಪ ಅವರ ಗರಡಿಯಲ್ಲಿ ಪಳಗಿದವರು. 2004 ರಲ್ಲಿ ಬಿಡುಗಡೆ ಆದ ಸಲ್ಮಾನ್ ಖಾನ್​ರ ‘ದಿಲ್ ನೆ ಜಿಸೆ ಅಪ್ನಾ ಕಹಾ’ ಸಿನಿಮಾದ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡು ಮರೆಯಾಗಿದ್ದ ಗುಲ್ಷನ್ ದೇವಯ್ಯ 2010 ರಲ್ಲಿ ಬಂದ ಕಲ್ಕಿ ಕೊಚ್ಲಿನ್ ನಟಿಸಿ ಅನುರಾಗ್ ಕಶ್ಯಪ್ ನಿರ್ದೇಶಿಸಿದ್ದ ‘ದಿ ಗರ್ಲ್ ಇನ್ ಯೆಲ್ಲೊ ಬೂಟ್ಸ್’ ಸಿನಿಮಾ ಮೂಲಕ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು.

2023 ರಲ್ಲಿ ಬಿಡುಗಡೆ ಆದ ‘ಗನ್ಸ್ ಆಂಡ್ ಗುಲಾಬ್ಸ್’ ವೆಬ್ ಸರಣಿಯಲ್ಲಿನ ಗುಲ್ಷನ್ ನಟನೆಗೆ ಬಹಳ ಪ್ರಶಂಸೆ ವ್ಯಕ್ತವಾಗಿತ್ತು. ಸಾಲು ಸಾಲು ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ನಟ ಇದೀಗ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.