ಕಾನ್ಪುರ: ಕಾನ್ಪುರ ಸಮೀಪದ ಬಿಕ್ರು ಗ್ರಾಮದಲ್ಲಿ ನಡೆದ ಎಂಟು ಪೊಲೀಸರ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಗ್ಯಾಂಗ್ಸ್ಟರ್ ವಿಕಾಸ್ ದುಬೆ ಆಪ್ತ ಅಮರ್ ದುಬೆ ಎಂಬಾತನ ಪೊಲೀಸ್ ಎನ್ಕೌಂಟರ್ನಲ್ಲಿ ಮೃತಪಟ್ಟಿದ್ದಾನೆ.
ಬುಧವಾರ ಬೆಳಗ್ಗೆ ಹಮೀರ್ಪುರದ ಮೌದಾಹಾದಲ್ಲಿ ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ (ಎಸ್ಟಿಎಫ್) ನಡೆಸಿದ ಎನ್ಕೌಂಟರ್ನಲ್ಲಿ ಅಮರ್ ದುಬೆ ಅಸುನೀಗಿದ್ದಾನೆ. ಈತನೂ ಸಹ ಕುಖ್ಯಾತ ರೌಡಿಶೀಟರ್ ಆಗಿದ್ದು, ಅನೇಕ ಅಪರಾಧಗಳಲ್ಲಿ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿದ್ದ.
ಕಾನ್ಪುರ ಸಮೀಪದ ಬಿಕ್ರು ಗ್ರಾಮದಲ್ಲಿ ನಡೆದ ಎಂಟು ಪೊಲೀಸರ ಹತ್ಯಾಕಾಂಡದಲ್ಲಿ ಈತನೂ ಸಹ ಪ್ರಮುಖ ಆರೋಪಿಯಾಗಿದ್ದ.
ಎಂಟು ಪೊಲೀಸರ ಹತ್ಯೆಗೆ ವಿಕಾಸ್ ದುಬೆಯೇ ನೇರ ಹೊಣೆ ಎಂದು ಆರಂಭದ ಪ್ರಾಥಮಿಕ ಮೂಲಗಳು ಬಹಿರಂಪಡಿಸಿದ್ದವು. ಹತ್ಯೆಗೈದು ಆತ ದೆಹಲಿ-ಮಥುರಾ ಹೆದ್ದಾರಿಯ ಹೋಟೆಲ್ವೊಂದರಲ್ಲಿ ಬಚ್ಚಿಟ್ಟುಕೊಂಡಿದ್ದ. ಫರೀದಾಬಾದ್ನ ಬಧ್ಕಲ್ ಚೌಕ ಏರಿಯಾದ ಹೋಟೆಲ್ನಲ್ಲಿ ತಂಗಿದ್ದ ಎಂದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಕಾಸ್ ದುಬೆಯ ಸಹಚರನೊಬ್ಬನನ್ನು ಬಂಧಿಸಿದಾಗ ದುಬೆ ತನ್ನೊಂದಿಗೆ ಫರೀದಾಬಾದ್ ಹೋಟೆಲ್ನಲ್ಲಿ ಇರುವುದಾಗಿ ಹೇಳಿದ್ದ. ಸುಮಾರು 200 ಪೊಲೀಸ್ ಸಿಬ್ಬಂದಿ ಒಳಗೊಂಡು 20 ತಂಡಗಳನ್ನು ಉತ್ತರ ಪ್ರದೇಶ ಪೊಲೀಸ್ ಇಲಾಖೆ ರಚಿಸಿದ್ದು, ವಿಕಾಸ್ ದುಬೆಗಾಗಿ ರಾಜ್ಯಾದ್ಯಂತ ಹುಡುಕಾಟ ನಡೆಸುತ್ತಿದ್ದಾರೆ.
ಕಾನ್ಪುರ ಸಮೀಪದ ಡಿಕ್ರು ಗ್ರಾಮದಲ್ಲಿ ವಿಕಾಸ್ ದುಬೆ ಎಂಬ ಕ್ರಿಮಿನಲ್ ಅಡಗಿಕೊಂಡಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರ ತಂಡ ಆತನ ಬಂಧನಕ್ಕೆ ಬಲೆ ಬೀಸಿತ್ತು. ವಿಕಾಸ್ ದುಬೆ 60 ಅಪರಾಧ ಪ್ರಕರಣಗಳಲ್ಲಿ ಬೇಕಾದವನಾಗಿದ್ದ. ಜುಲೈ 3ರ ತಡ ರಾತ್ರಿ ಕಾರ್ಯಾಚರಣೆ ಆರಂಭವಾಗಿತ್ತು. ಅಂದು ನಸುಕಿನ ವೇಳೆ ವಿಕಾಸ್ ದುಬೆಯ ಅಡಗುದಾಣದ ರೂಫ್ ಟಾಪ್ನಿಂದ ಗುಂಡಿನ ದಾಳಿ ನಡೆದಿತ್ತು. ಇದರಲ್ಲಿ ಡಿಎಸ್ಪಿ ಸೇರಿದಂತೆ 8 ಪೊಲೀಸರ ಹತ್ಯೆ ನಡೆದಿತ್ತು. (ಏಜೆನ್ಸೀಸ್)