ಬೆಂಗಳೂರು ಕನ್ನಡಿಗರು ಮತ್ತು ತಮಿಳರು ದ್ರಾವಿಡ ಕುಲಕ್ಕೆ ಸೇರಿದವರು. ನಮ್ಮಲ್ಲಿ ಯಾವುದೇ ಭೇದ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ನಗರದಲ್ಲಿ ಭಾನುವಾರ ನಡೆದ ಕನ್ನಡಿಗರು ಹಾಗೂ ಕರ್ನಾಟಕ ತಮಿಳರ ಸಾಂಸ್ಕೃತಿಕ ಮತ್ತು ಒಗ್ಗಟ್ಟಿನ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಮಿಳರು ಮತ್ತು ಕನ್ನಡಿಗರ ನಡುವೆ ಸಾಮರಸ್ಯ ಮೂಡಿಸಲು ಯತ್ನಿಸಿದ್ದೆ. ಹಲಸೂರಿನಲ್ಲಿ ನನೆಗುದಿಗೆ ಬಿದ್ದಿದ್ದ ತಿರುವಳ್ಳವರ್ ಪ್ರತಿಮೆ ಯೋಜನೆಯನ್ನು ಪೂರ್ಣಗೊಳಿಸಿ ಎರಡೂ ಭಾಷಿಕರ ನಡುವೆ ಭ್ರಾತೃತ್ವ ಸೃಷ್ಟಿಸಿದ್ದೆ. ಆಗಿನ ಮುಖ್ಯಮಂತ್ರಿ ಕರುಣಾನಿಧಿ ಜತೆ ಮಾತನಾಡಿ ಚೆನ್ನೈನಲ್ಲಿ ಸರ್ವಜ್ಞರ ಪ್ರತಿಮೆ ನಿರ್ಮಿಸಲು ಕೋರಿದ್ದೆ ಎಂದು ಅವರು ಹೇಳಿದರು.
ಅಲ್ಲದೆ, ಕರ್ನಾಟಕದಲ್ಲಿರುವ ತಮಿಳರ ಏಳಿಗೆಗೆ ಪ್ರಯತ್ನಿಸಿದ್ದೆ. ಕನ್ನಡ ಮತ್ತು ತಮಿಳು ಭಾಷಿಕರ ನಡುವೆ ಉತ್ತಮ ಬಾಂಧವ್ಯ ಸೃಷ್ಟಿಸಿದ್ದೆ. ಮುಂದೆಯೂ ಅದೇ ರೀತಿ ಇರಲು ಬಯಸುವೆ ಎಂದು ಹೇಳಿದರು.
ಕರವೇ ಅಧ್ಯಕ್ಷ ಟಿ.ಎ. ನಾರಾಯಣ ಗೌಡ ಮಾತನಾಡಿ, ಕಾವೇರಿ ವಿಚಾರಕ್ಕೆ ಬಂದಾಗ ತಮಿಳರು ಮತ್ತು ಕನ್ನಡಿಗರ ನಡುವೆ ಅಂತರ ಸೃಷ್ಟಿಯಾಗಿರುವುದು ನಿಜ. ಉಳಿದಂತೆ ತಮಿಳುನಾಡು ಮತ್ತು ಕರ್ನಾಟಕ ನಡುವೆ ಉತ್ತಮ ಸಂಬಂಧ ಇರಬೇಕು ಎಂದು ಬಯಸುತ್ತೇನೆ ಎಂದು ಹೇಳಿದರು.
ನಾವೆಲ್ಲ ದಕ್ಷಿಣ ಭಾರತದವರು ಎಂಬುದು ಹೆಮ್ಮೆಯ ವಿಷಯ. ನಾವು ದ್ರಾವಿಡ ಕುಲಕ್ಕೆ ಸೇರಿದವರಾಗಿದ್ದು. ಜತೆಯಾಗಿಯೇ ಇರಬೇಕು. ಅಣ್ಣ- ತಮ್ಮಂದಿರಂತೆ ಬದುಕಬೇಕು. ಉತ್ತರ ಭಾರತೀಯರು ನಮ್ಮ ಮೇಲೆ ಹಿಂದಿ ಹೇರಿಕೆ ಮಾಡುವುದನ್ನು ಜತೆಯಾಗಿಯೇ ಎದುರಿಸಬೇಕು,’ ಎಂದು ಹೇಳಿದರು.
ಶಾಸಕರಾದ ಶ್ರೀನಿವಾಸ್, ಮಂಥರ್ ಗೌಡ, ಎ.ಎಸ್. ಪೊನ್ನಣ್ಣ, ರಿಜ್ವಾನ್ ಅರ್ಷದ್, ರಾಜ್ಯಸಭಾ ಮಾಜಿ ಸದಸ್ಯ ಎಲ್. ಹನುಮಂತಯ್ಯ ಪಾಲ್ಗೊಂಡಿದ್ದರು.