ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ವಿದೇಶಗಳಲ್ಲಿ ಸಿಲುಕಿರುವ ಭಾರತೀಯರು ದೇಶಕ್ಕೆ ಹಿಂದಿರುಗಲು ತವಕಿಸುತ್ತಿದ್ದು, ವಾಪಸ್ ಕರೆಸಿಕೊಳ್ಳುವಂತೆ ಸರ್ಕಾರಗಳ ಮೇಲೆ ತೀವ್ರ ಒತ್ತಡ ಹೇರುತ್ತಿವೆ. ಲಾಕ್ಡೌನ್ ಕಾರಣಕ್ಕೆ ಅಂತಾರಾಷ್ಟ್ರೀಯ ವಿಮಾನಗಳ ಪ್ರಯಾಣ ರದ್ದಾಗಿರುವುದರಿಂದ ಭಾರತಕ್ಕೆ ವಾಪಸಾಗಲು ಉದ್ದೇಶಿಸಿದ್ದ ವಿದೇಶದಲ್ಲಿರುವ ಕನ್ನಡಿಗರು ಅತಂತ್ರರಾಗಿದ್ದಾರೆ. ಈ ಸಂದರ್ಭ ಕೇಂದ್ರ ಸರ್ಕಾರ ವಿಶೇಷ ವಿಮಾನದ ಮೂಲಕ ಕರೆತರುವ ಅವಕಾಶವಿದೆ. ಈ ಪ್ರಯತ್ನ ಏಕೆ ಮಾಡುತ್ತಿಲ್ಲ ಎಂಬ ಅಸಹನೆಯೂ ಕಟ್ಟೆಯೊಡೆದಿದೆ.
ವೃತ್ತಿ, ಶಿಕ್ಷಣ, ಪ್ರವಾಸ, ಕೌಟುಂಬಿಕ ಭೇಟಿಯ ಕಾರಣಕ್ಕೆ ವಿದೇಶದಲ್ಲಿರುವ ಕನ್ನಡಿಗರು ತಕ್ಷಣವೇ ತವರಿಗೆ ಬರಲು ಆಸಕ್ತಿ ತೋರಿಸುತ್ತಿದ್ದಾರೆ. ತಮ್ಮ ಕ್ಷೇತ್ರದ ಶಾಸಕರು, ಸಚಿವರು, ಅಧಿಕಾರಿಗಳಿಗೆ ಸಂದೇಶ ಕಳಿಸಿ ತಾವು ದೇಶಕ್ಕೆ ವಾಪಸಾಗಲು ವ್ಯವಸ್ಥೆ ಮಾಡಲೇಬೇಕೆಂದು ಪಟ್ಟು ಹಿಡಿಯುತ್ತಿದ್ದಾರೆ. ವಿವಿಧ ದೇಶಗಳಿಗೆ ಶೈಕ್ಷಣಿಕ ಉದ್ದೇಶಕ್ಕೆ ತೆರಳಿರುವ ವಿದ್ಯಾರ್ಥಿಗಳು ವಿಮಾನ ನಿಲ್ದಾಣಗಳಲ್ಲೇ ಸಿಲುಕಿದ್ದು, ಆತಂಕದಲ್ಲೇ ದಿನ ಕಳೆಯುತ್ತಾ ಭಾರತದ ತೀರ್ವನಕ್ಕೆ ಎದುರು ನೋಡುತ್ತಿದ್ದಾರೆ.
ಹೊರ ರಾಜ್ಯಗಳಿಂದಲೂ ಒತ್ತಡ: ಇನ್ನೊಂದು ಬೆಳವಣಿಗೆಯಲ್ಲಿ ಕೆಲಸ ಅಥವಾ ಪ್ರವಾಸದ ನಿಮಿತ್ತ ಪರ ರಾಜ್ಯದಲ್ಲಿರುವ ಕನ್ನಡಿಗರೂ ವಿಶೇಷ ಬಸ್ ಮೂಲಕ ವಾಪಸ್ ಕರೆಸಿಕೊಳ್ಳುವಂತೆ ಕೋರಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ಈ ಬಗ್ಗೆ ವಿಷಯ ಪ್ರಸ್ತಾಪಿಸಿದ್ದು, ಗುಜರಾತ್ ಮುಖ್ಯಮಂತ್ರಿ ಆ ರಾಜ್ಯದವರನ್ನು ಬಸ್ ಮೂಲಕ ಕರೆಸಿಕೊಂಡು ವ್ಯವಸ್ಥೆ ಮಾಡುತ್ತಾರೆಂದರೆ ನಮ್ಮ ರಾಜ್ಯದಲ್ಲಿ ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದಾರೆ. ಹಾಗೇ ವಿವಿಧ ಕಾರಣಕ್ಕೆ ಬೇರೆ ರಾಜ್ಯದಲ್ಲಿ ಸಿಲುಕಿರುವ ಕನ್ನಡಿಗರನ್ನು ಕರೆಸಲು ಸೂಕ್ತ ವ್ಯವಸ್ಥೆ ಆಗಬೇಕೆಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಸುತ್ತುವರಿದ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳದ ಗಡಿಯಲ್ಲಿ ವಲಸೆ ಕಾರ್ವಿುಕರು ರಾಜ್ಯದ ಒಳಗೆ ಪ್ರವೇಶಕ್ಕೆ ಕಾಯ್ದಿದ್ದಾರೆ. 10-12 ದಿನ ನಿರಂತರವಾಗಿ ನಡೆದು ಬಂದು ಗಡಿ ಭಾಗದ ಆಶ್ರಯ ತಾಣದಲ್ಲಿ ದಿನ ಕಳೆಯುತ್ತಿದ್ದಾರೆ. ಅವರಿಗೆ ಊಟ ವಸತಿಗೆ ವ್ಯವಸ್ಥೆ ಮಾಡಿದ್ದರೂ ಕೂಡಲೇ ತಮ್ಮೂರು ತಲುಪುವ ತಹತಹದಲ್ಲಿದ್ದಾರೆ. ಲಾಕ್ಡೌನ್ ಮುಂದೂಡಿಕೆಯಾಗುತ್ತಲೇ ಇರುವುದು ಅವರ ತಾಳ್ಮೆ ಕಳೆದಿದೆ. ಮಹಾರಾಷ್ಟ್ರ ಮತ್ತು ಕೇರಳ ಗಡಿಯಲ್ಲಿ ಅವರನ್ನು ಸಮಾಧಾನ ಪಡಿಸುವುದು ಪೊಲೀಸ್ ಸಿಬ್ಬಂದಿಗೆ ಸವಾಲಿನ ಕೆಲಸವೂ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರಕ್ಕೂ ಸವಾಲು
ಕೇಂದ್ರ ಸರ್ಕಾರ ಲಾಕ್ಡೌನ್ಗೆ ಮುನ್ನ ವಿಶೇಷ ವಿಮಾನಗಳನ್ನು ಕಳಿಸಿ ಭಾರತೀಯರನ್ನು ಕರೆಸಿಕೊಂಡಿತ್ತು. ಲಾಕ್ಡೌನ್ ಬಳಿಕವೂ ಒಂದೆರಡು ದೇಶಕ್ಕೆ ವಿಮಾನ ಕಳಿಸಿತ್ತು. ಆದರೆ, ಈಗ ಸೋಂಕಿತರ ಸಂಖ್ಯೆ ದೇಶದಲ್ಲಿ ಹೆಚ್ಚುತ್ತಿರುವಾಗ ವಿದೇಶಗಳಿಗೆ ವಿಮಾನ ಕಳಿಸಲು ಸರ್ಕಾರ ಹಿಂದೇಟು ಹಾಕಿದೆ. ಇನ್ನು ರಾಜ್ಯ ಸರ್ಕಾರ ಕೂಡ ವಲಸೆ ಕಾರ್ವಿುಕರನ್ನು ರಾಜ್ಯಕ್ಕೆ ಕರೆಸಿಕೊಂಡರೂ ಅವರನ್ನು ಕೆಲ ದಿನಗಳ ಮಟ್ಟಿಗೆ ಕ್ವಾರಂಟೈನ್ನಲ್ಲಿಡಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ. ಲಂಡನ್ನಲ್ಲಿ ಸರಿ ಸುಮಾರು 650 ವಿದ್ಯಾರ್ಥಿಗಳು ಅತಂತ್ರರಾಗಿದ್ದು, ಇವರಲ್ಲಿ ಕನ್ನಡಿಗರೂ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಗಲ್ಪ್ ರಾಷ್ಟ್ರಗಳಾದ ಯುಎಇ, ಕುವೈತ್, ಸೌದಿ ಅರೇಬಿಯಾ, ಒಮಾನ್, ಬಹರೆನ್, ಕತಾರ್ನಲ್ಲಿ ಬ್ಲೂ ಕಾಲರ್ ಉದ್ಯೋಗ ಮಾಡುವವರು ಆಸೆಗಣ್ಣಿನಿಂದ ವಾಪಸಾಗಲು ಕಾಯುತ್ತಿದ್ದಾರೆ. ಗೋವಾದಲ್ಲಿರುವ ವಿಜಯಪುರದ ಕನ್ನಡಿಗರು ತಮ್ಮೂರಿಗೆ ಮರಳಲು ಅನುಮತಿ ಯಾಚಿಸಿದ್ದಾರೆ. ಗಂಗಾವತಿಯಿಂದ ಅಜ್ಮೀರ್ ಪ್ರವಾಸಕ್ಕೆ ಹೋದ ಕುಟುಂಬಗಳು ಮುಂಬೈ ಹೋಟೆಲ್ನಲ್ಲಿ ಸಿಲುಕಿವೆ. ಹಾನಗಲ್ ತಾಲೂಕಿನ ಜವಾಹರ ನವೋದಯ ವಿದ್ಯಾಲಯದ 23 ವಿದ್ಯಾರ್ಥಿಗಳು ಛತ್ತೀಸ್ಘಡದಲ್ಲಿ ಸಿಲುಕಿದ್ದಾರೆ. ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ಕೆಲವರು ಹೈದರಾಬಾದ್ನಲ್ಲಿ ಸಿಲುಕಿದ್ದು, ಪರದಾಟ ನಡೆಸಿದ್ದಾರೆ.