ವಿವಿ ಕಲಾ ಕಾಲೇಜಿನಲ್ಲಿ ಜಿಲ್ಲಾ ಕಸಾಪ ವತಿಯಿಂದ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಪ್ರಾಂಶುಪಾಲ ಪ್ರೊ.ಬಿ.ಕರಿಯಣ್ಣ ಉದ್ಘಾಟಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಡಾ. ಡಿ.ಎನ್.ಯೋಗೀಶ್ವರಪ್ಪ, ಪ್ರೊ.ನಾಗರಾಜು, ಡಾ.ಬಿ.ಎಸ್.ಮಂಜುಳಾ, ಡಾ.ವೆಂಕಟರೆಡ್ಡಿ, ಡಾ.ಶಿವಣ್ಣ ಬೆಳವಾಡಿ, ರೇಣುಕಾ, ವೈ.ಕೆ.ರಾಮರಾಜು ಇದ್ದರು. 
ನ್ಯೂಸ್

ಉದ್ಯೋಗದಿಂದ ಕನ್ನಡಿಗರು ವಂಚಿತ; ಪ್ರೊ.ಕರಿಯಣ್ಣ ಬೇಸರ

ತುಮಕೂರು: ಕೇಂದ್ರ ಸರ್ಕಾರ ಉದ್ಯೋಗಗಳಿಗೆ ನಡೆಸುವ ಪರೀಕ್ಷೆಗಳಲ್ಲಿ ಇನ್ನೂ ಕನ್ನಡ ಭಾಷೆಯಲ್ಲಿ ಉತ್ತರ ಬರೆಯುವ ಅವಕಾಶ ಮಾಡಿಕೊಟ್ಟಿಲ್ಲ. ಹಾಗಾಗಿ, ಕನ್ನಡಿಗರು ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಉದ್ಯೋಗ ವಂಚಿತರಾಗುತ್ತಿದ್ದಾರೆ ಎಂದು ತುಮಕೂರು ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಕರಿಯಣ್ಣ ಹೇಳಿದರು.

ನಗರದ ವಿವಿ ಕಲಾ ಕಾಲೇಜಿನಲ್ಲಿ ಜಿಲ್ಲಾ ಕಸಾಪ ವತಿಯಿಂದ ಮಂಗಳವಾರ ಆಯೋಜಿಸಿದ್ದ ಗೂಳೂರು ಸಿದ್ದವೀರಾಚಾರ‌್ಯ, ಸಿ.ವಿ.ಮಹದೇವಯ್ಯ, ಟಿ.ಎ.ಮಂಗಳಮ್ಮ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರ್ಕಾರ ಕೇವಲ ಸುತ್ತೋಲೆಗಳನ್ನು ಹೊರಡಿಸುವುದರ ಮೂಲಕ ಕನ್ನಡವನ್ನು ಆಡಳಿತ ಭಾಷೆಯಾಗಿ ಘೋಷಿಸಿದೆಯೇ ಹೊರತು ಅದನ್ನು ವ್ಯವಸ್ಥಿತವಾಗಿ ಅನುಷ್ಠಾನಕ್ಕೆ ತರುವಲ್ಲಿ ವಿಫಲವಾಗಿದೆ ಎಂದು ಬೇಸರಿಸಿದರು.

ಕೇಂದ್ರ ಸರ್ಕಾರದ ಅಧೀನದಲ್ಲಿನ ಬ್ಯಾಂಕ್, ರೈಲ್ವೆ, ದೂರವಾಣಿ ಸೇರಿ ಮತ್ತಿತರರ ಕಚೇರಿಗಳಲ್ಲಿ ಇನ್ನೂ ಕನ್ನಡ ಬಳಕೆಯಾಗುತ್ತಿಲ್ಲ. ಹೊರ ರಾಜ್ಯಗಳಿಂದ ಉದ್ಯೋಗಕ್ಕಾಗಿ ಅರಸಿ ಇಲ್ಲಿಗೆ ಬರುವ ವಲಸೆ ಕಾರ್ಮಿಕರು ಅಚ್ಚುಕಟ್ಟಾಗಿ ಕನ್ನಡದಲ್ಲಿ ಮಾತನಾಡುತ್ತಿದ್ದಾರೆ. ಆದರೆ, ನಮ್ಮವರು ಅವರ ಭಾಷೆಯಲ್ಲಿ ವ್ಯವಹರಿಸುತ್ತಾ ಕನ್ನಡದ ಬಗ್ಗೆ ಕೀಳರಿಮೆ ಮನೋಭಾವ ತೋರಿಸುತ್ತಿರುವುದು ಅತ್ಯಂತ ವಿಷಾದನೀಯ ಎಂದರು.

ಉಪ ನೊಂದಣಾಧಿಕಾರಿಗಳ ಕಚೇರಿಯಲ್ಲಿ ಶೇ.100 ಕನ್ನಡ ಬಳಕೆ ಆಗುತ್ತಿದೆಯೇ ಹೊರತು ಬೇರೆ ಇಲಾಖೆಗಳು ಕನ್ನಡ ಬಳಸಲು ಹೆಚ್ಚು ಆಸಕ್ತಿ ತೋರಿಸುತ್ತಿಲ್ಲ. ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಎಲ್ಲ ಇಲಾಖೆಯಲ್ಲಿ ಬಳಸುವಂತೆ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂದರು.

ಶೂನ್ಯ ಸಂಪಾದನೆ ಎಂಬ ವಿಷಯ ಕುರಿತು ಸಂಶೋಧಕ ಡಾ. ಡಿ.ಎನ್.ಯೋಗೀಶ್ವರಪ್ಪ, ಯೋಗಾಭ್ಯಾಸದ ಬಗ್ಗೆ ನಿವೃತ್ತ ಉಪನಿರ್ದೇಶಕ ಪ್ರೊ. ನಾಗರಾಜ್ ಹಾಗೂ ಡಾ. ಬಿ.ಎಸ್.ಮಂಜುಳಾ ಅಕ್ಕಮಹಾದೇವಿ ಕುರಿತು ಉಪನ್ಯಾಸ ನೀಡಿದರು. ಕಸಾಪ ತಾಲೂಕು ಅಧ್ಯಕ್ಷ ಚಿಕ್ಕಬೆಳ್ಳಾವಿ ಶಿವಕುಮಾರ್ ಇದ್ದರು. ಡಾ. ವೆಂಕಟರೆಡ್ಡಿ ರಾಮರೆಡ್ಡಿ ಕಾರ್ಯಕ್ರಮ ನಿರೂಪಿಸಿದರು. ಡಾ. ಶಿವಣ್ಣ ಬೆಳವಾಡಿ ಸ್ವಾಗತಿಸಿ, ರೇಣುಕಾ ವಂದಿಸಿದರು.

ಕನ್ನಡ ಸುಂದರವಾದ ಭಾಷೆ. ಇತ್ತೀಚೆಗೆ ಬೇರೆ ಭಾಷೆಯ ಪದಗಳ ಕತೆ ಕನ್ನಡ ಸೇರಿಸಿ ಮಾತನಾಡಿದರೆ ಕನ್ನಡ ಬೆಳೆದರೂ ಅದರ ಮೂಲ ಸ್ವರೂಪಕ್ಕೆ ಧಕ್ಕೆ ಆಗುತ್ತಿದೆ. ಶುದ್ಧ ಕನ್ನಡದಲ್ಲಿ ಮಾತನಾಡುವ, ಬರೆಯುವ ಇಚ್ಛಾಶಕ್ತಿಯನ್ನು ನಾವೆಲ್ಲಾ ತೋರಬೇಕಿದೆ. ಇದು ವಿದ್ಯಾರ್ಥಿಗಳಿಂದಲೇ ಆರಂಭವಾಗಬೇಕು.

|ಕೆ.ಎಸ್.ಸಿದ್ದಲಿಂಗಪ್ಪ ಜಿಲ್ಲಾ ಕಸಾಪ ಅಧ್ಯಕ್ಷ