ನ್ಯೂಸ್

ಕೆನಡಾ ಪ್ರಧಾನಿ ರೇಸ್​ನಲ್ಲಿ ಕನ್ನಡಿಗ ಚಂದ್ರ ಆರ್ಯ

ಜಸ್ಟಿನ್ ಟ್ರುಡೊ ರಾಜೀನಾಮೆ ಹಿನ್ನೆಲೆ | ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ

ಒಟ್ಟಾವಾ: ಕೆನಡಾದ ಪ್ರಧಾನ ಮಂತ್ರಿ ಹುದ್ದೆಗೆ ಜಸ್ಟಿನ್ ಟ್ರುಡೊ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಪ್ರಧಾನಿ ಹುದ್ದೆಗೇರಲು ಹಲವರು ಆಕಾಂಕ್ಷೆ ವ್ಯಕ್ತಪಡಿಸುತ್ತಿದ್ದಾರೆ. ಕರ್ನಾಟಕ ಮೂಲದ ಕೆನಡಾದ ಸಂಸದ ಚಂದ್ರ ಆರ್ಯ ಸಹ ಪ್ರಧಾನಿ ಹುದ್ದೆಗೆ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.

‘ನಾನು ಕೆನಡಾವನ್ನು ಸಾರ್ವಭೌಮ ಗಣರಾಜ್ಯವಾಗಿ ಮಾಡಲು ಬಯಸುತ್ತೇನೆ. ಕೆನಡಾ ತನ್ನ ಭವಿಷ್ಯವನ್ನು ನಿರ್ಧರಿಸುವ ಸಮಯ ಬಂದಿದೆ. ನಾನು ಸಣ್ಣ ಮತ್ತು ಹೆಚ್ಚು ಪರಿಣಾಮಕಾರಿ ಸರ್ಕಾರವನ್ನು ಮುನ್ನಡೆಸಲು ಬಯಸುತ್ತೇನೆ. ನನ್ನ ಸಚಿವ ಸಂಪುಟದಲ್ಲಿ ಕೋಟಾ ಬದಲು ಅರ್ಹತೆಯ ಮೂಲಕ ಆಯ್ಕೆಯಾದವರಿಗೆ ಸ್ಥಾನ ನೀಡಲಾಗುವುದು’ ಎಂದು ಸಾಮಾಜಿಕ ಜಾಲತಾಣದಲ್ಲಿ ಅವರು ತಿಳಿಸಿದ್ದಾರೆ. ಕೆನಡಾದ ಯುವಜನತೆ ಮತ್ತು ಮಧ್ಯಮವರ್ಗದವರು ಬೆಲೆಯೇರಿಕೆ ಬಿಸಿ ಎದುರಿಸುತ್ತಿದ್ದಾರೆ. ನಾನು ಕೆನಡಿಯನ್ನರ ಶ್ರೇಯೋಭಿವೃದ್ಧಿಗಾಗಿ ಸದಾ ಕೆಲಸ ಮಾಡಿದ್ದೇನೆ. ನಮ್ಮ ಮಕ್ಕಳು ಮತ್ತು ಮುಂದಿನ ಪೀಳಿಗೆಗಾಗಿ ನಾವು ಧೃಢ ನಿರ್ಧಾರ ತೆಗೆದುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಚಂದ್ರ ಆರ್ಯ ಕರೆ ನೀಡಿದ್ದಾರೆ.

ತುಮಕೂರು ಮೂಲ

ಚಂದ್ರ ಆರ್ಯ ತುಮಕೂರು ಜಿಲ್ಲೆ ಶಿರಾ ತಾಲೂಕಿನ ದ್ವಾರಾಳು ಗ್ರಾಮದವರು. ಇವರು ಧಾರವಾಡ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ಪಡೆದು 2006 ರಲ್ಲಿ ಕೆನಡಾಗೆ ತೆರಳಿದ್ದರು. ಇಂಡೋ - ಕೆನಡಾ ಒಟ್ಟಾವಾ ಬಿಸಿನೆಸ್ ಚೇಂಬರ್​ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. 2022 ರಲ್ಲಿ ಕೆನಡಾ ಸಂಸತ್ತಿನಲ್ಲಿ ಮಾತೃಭಾಷೆ ಕನ್ನಡದಲ್ಲಿ ಭಾಷಣ ಮಾಡುವ ಮೂಲಕ ಕನ್ನಡದಲ್ಲಿ ಮಾತನಾಡಿದ ಮೊದಲ ಸಂಸದ ಎನಿಸಿಕೊಂಡಿದ್ದರು.

15ರಲ್ಲಿ ಸಂಸದರಾಗಿ..

62 ವರ್ಷದ ಚಂದ್ರ ಆರ್ಯ ಅವರು ಕೆನಡಾ ರಾಜಧಾನಿ ಒಟ್ಟಾವಾದ ಉಪನಗರವಾದ ನೇಪಿಯನ್ ಕ್ಷೇತ್ರದಿಂದ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದರು. ಆ ಬಳಿಕ 2019 ಮತ್ತು 2021 ರಲ್ಲಿ ಅವರು ಮರು ಆಯ್ಕೆಯಾಗಿದ್ದರು.

ಟ್ರಂಪ್​ಗೆ ಟ್ರುಡೊ ತಿರುಗೇಟು

ಕೆನಡಾವನ್ನು ಅಮೆರಿಕದ 51 ನೇ ರಾಜ್ಯವಾಗಿಸುವ ಕುರಿತು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತಾವನೆ ಇಟ್ಟಿದ್ದರು. ಟ್ರಂಪ್ ಹೇಳಿಕೆಯನ್ನು ಟೀಕಿಸಿರುವ ಕೆನಡಾದ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೋ ಕೆನಡಾ ಜನತೆ ತಾವು ಕೆನಡಿಯನ್ನರು ಎನಿಸಿಕೊಳ್ಳಲು ಇಷ್ಟ ಪಡುತ್ತಾರೆ. ನಾವು ಅಮೆರಿಕನ್ನರಲ್ಲ ಎಂದು ತಿಳಿಸಿದ್ದಾರೆ. ಕೆನಡಾದಿಂದ ಆಮದಾಗುವ ಉತ್ಪನ್ನಗಳಿಗೆ ಶೇ. 25 ರಷ್ಟು ಸುಂಕ ವಿಧಿಸಲು ನಿರ್ಣಯ ತೆಗೆದುಕೊಳ್ಳುವುದಾಗಿ ಟ್ರಂಪ್ ತಿಳಿಸಿದ್ದರು. ಈ ವಿಚಾರದಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಕೆನಡಾವನ್ನು ಅಮೆರಿಕದ 51 ನೇ ರಾಜ್ಯವಾಗಿಸುವ ಕುರಿತು ಟ್ರಂಪ್ ಹೇಳಿಕೆ ನೀಡುತ್ತಿದ್ದಾರೆ ಎಂದು ಟ್ರುಡೊ ತಿಳಿಸಿದ್ದಾರೆ.