ನ್ಯೂಸ್

ಭಾವನಾತ್ಮಕತೆ ಹೊಂದಿರುವ ಕನ್ನಡ

ಪ್ರಸಿನ್ ಕೆ.ಆರ್

ಹುಣಸೂರು: ಕನ್ನಡ ಭಾಷೆ ಸದಾ ಜೀವಂತಿಕೆ ಮತ್ತು ಸುಜ್ಞಾನ ಹೊಂದಿರುವ ಪ್ರಾಚೀನ ಭಾಷೆಯಾಗಿದೆ ಎಂದು ಗಾವಡಗೆರೆ ಗುರುಲಿಂಗಜಂಗಮದೇವರ ಮಠದ ಶ್ರೀ ನಟರಾಜಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್(ಕಸಾಪ) ಮತ್ತು ರೋಟರಿ ಕ್ಲಬ್ ಹುಣಸೂರು ಸಹಯೋಗದಲ್ಲಿ ನಗರದ ರೋಟರಿ ಭವನದಲ್ಲಿ ಸೋಮವಾರ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಕನ್ನಡ ಭಾಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ನಮಗೆ ಕನ್ನಡ ಭಾಷೆ ಕೇವಲ ಸಂವಹನದ ಸೇತುವೆ ಮಾತ್ರವಲ್ಲ, ಅದೊಂದು ಭಾವನಾತ್ಮಕ ಸಂಬಂಧ. ಕನ್ನಡಕ್ಕೆ ಪ್ರಾಚೀನತೆ ಇದೆ. ಪರಂಪರೆ ಇದೆ. ಸಂಸ್ಕೃತಿಯನ್ನು ಕಟ್ಟಿಬೆಳೆಸುವ ಶಕ್ತಿಯೂ ಇದೆ. ಕನ್ನಡ ಬೇರೆ ಭಾಷೆಗಳನ್ನು ಬೆಳೆಸಿದ ಜನಕ ಕೂಡ ಹೌದು. ಕನ್ನಡದ ಸಾರಸ್ವತ ಲೋಕದಲ್ಲಿ ಜ್ಞಾನಪೀಠ ಗಳಿಸಿದ ಮಹನೀಯ ಸಾಹಿತಿಗಳಲ್ಲಿ ಅನೇಕರ ಮಾತೃಭಾಷೆ ಬೇರೆಯಾಗಿದೆ. ಆದರೂ ಕನ್ನಡದ ಮೂಲಕ ಅವರು ವಿಶ್ವಮಾನ್ಯರಾದರು. ದೇಶಕ್ಕೆ ಸಂವಿಧಾನ ನೀಡಿದ ಅಂಬೇಡ್ಕರ್‌ರಿಗೆ ಸಂವಿಧಾನ ರಚನೆಗೆ ದಾರಿದೀಪವಾಗಿ ನಾಡಿನ ಜನರಿಗೆ ಸನಿಹವಾದ ಸರಳ ಭಾಷೆಯಲ್ಲಿ ರಚನೆಗೊಂಡ ದಾಸ ಮತ್ತು ಶರಣ ಸಾಹಿತ್ಯಗಳೇ ಪ್ರೇರಣೆಗಳಾದವು. ಕನ್ನಡ ಭಾಷೆ ಎಲ್ಲರ ಹೃದಯದ ಭಾಷೆಯಾಗಲು ಕನ್ನಡ ಸಾಹಿತ್ಯ ಪರಿಷತ್‌ನಂತಹ ಸಂಘಟನೆಗಳು ಈ ನಿಟ್ಟಿನಲ್ಲಿ ಕನ್ನಡವನ್ನು ಜನರ ಬಳಿಗೆ ಕೊಂಡೊಯ್ಯುವ ಆಲೋಚನೆಯ ಮೂಲಕ ಕಾರ್ಯಪ್ರವೃತ್ತರಾಗಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹದೇವ ಮಾತನಾಡಿ, ಆಧುನಿಕತೆ, ತಂತ್ರಜ್ಞಾನ ಮತ್ತು ಪೈಪೋಟಿಯ ಹೆಸರಿನಲ್ಲಿ ಕನ್ನಡ ಭಾಷೆಯ ಕಡೆಗಣನೆ ನಿಲ್ಲಬೇಕಿದೆ. ಮಕ್ಕಳಲ್ಲಿ ಮಾತೃಭಾಷೆಯ ಮೇಲಿನ ಆಸಕ್ತಿಯನ್ನು ಕಡಿಮೆ ಮಾಡುವುದು ಸರಿಯಲ್ಲ. ಭಾಷೆಯನ್ನು ಕಲಿಯುವ ಹಕ್ಕು ಮಕ್ಕಳದ್ದಾಗಿದೆ. ಹಾಗೆಂದ ಮಾತ್ರಕ್ಕೆ ಬಲವಂತವಾಗಿ ಆಂಗ್ಲಭಾಷೆಯ ಹೇರುವಿಕೆ ಸಂಸ್ಕೃತಿ ನಾಶಕ್ಕೆ ಕಾರಣವಾದೀತು ಎಂದು ಆತಂಕ ವ್ಯಕ್ತಪಡಿಸಿದರು.

ತಾಲೂಕು ಕಸಾಪ ಅಧ್ಯಕ್ಷ ಎಚ್.ಕೆ.ಮಹದೇವ್, ರೋಟರಿ ಅಧ್ಯಕ್ಷ ಡಾ.ಕೆ.ಪಿ.ಪ್ರಸನ್ನ ಮಾತನಾಡಿದರು. ಮಾದಳ್ಳಿ ಉಕ್ಕಿನಕಂತೆ ಮಠದ ಶ್ರೀ ಸಾಂಬಸದಾಶಿವಸ್ವಾಮಿಗಳು ಆಶೀರ್ವಚನ ನೀಡಿದರು. ರಾಜ್ಯ ಪ್ರೌಢಶಾಲಾ ಮುಖ್ಯ ಶಿಕ್ಷಕರ ಹಾಗೂ ಉಪ ಪ್ರಾಂಶುಪಾಲರ ಸಂಘದ ರಾಜ್ಯಾಧ್ಯಕ್ಷ ಪಿ.ಮಹದೇವಯ್ಯ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಗೋವಿಂದೇಗೌಡ, ತಾಲೂಕು ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಮೋಹನ್‌ರಾಜ್, ರಂಗಭೂಮಿ ಕಲಾವಿದ ಎಸ್.ಜಯರಾಂ, ಕುಮಾರ್ ಅರಸೇಗೌಡ ಇತರರು ಇದ್ದರು.