ಸಾಗರದಲ್ಲಿ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಮಂಜುಳಾ ಭಜಂತ್ರಿ, ವಿಜಯಕುಮಾರ್ ಪಾಟೀಲ್, ತೋಯಜಾಕ್ಷಿ, ವೆಂಕಟೇಶ್ ಜೋಯಿಸ್, ವಿ.ಟಿ.ಸ್ವಾಮಿ ಇತರರಿದ್ದರು. 
ನ್ಯೂಸ್

ಶಿವಾಜಿ ಕಾಲದ ಆಡಳಿತ ಭಾಷೆ ಕನ್ನಡ

ಸಾಗರ: ಹಿಂದುಗಳಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಟ್ಟವರು ಛತ್ರಪತಿ ಶಿವಾಜಿ. ಭಾರತದ ಇತಿಹಾಸದಲ್ಲಿ ಶಿವಾಜಿ ಮಹಾರಾಜರಿಗೆ ವಿಶೇಷ ಸ್ಥಾನವಿದೆ ಎಂದು ಇತಿಹಾಸ ತಜ್ಞ ಡಾ. ಕೆಳದಿ ವೆಂಕಟೇಶ್ ಜೋಯಿಸ್ ಹೇಳಿದರು.

ಸಾಗರದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿವಾಜಿ ಅವರ ಸಾಹಸ, ವೀರಗಾಥೆ ಪ್ರೇರಣಾದಾಯಕ. ಅತ್ಯಂತ ಸ್ವಾಭಿಮಾನದಿಂದ ಸಾಮ್ರಾಜ್ಯವನ್ನು ಕಟ್ಟಿದ ಶಿವಾಜಿ ಮಹಾರಾಜ ತನ್ನ ಶತ್ರುಗಳನ್ನು ನಾಮಾವಶೇಷ ಮಾಡಿದ್ದರು. ಶಿವಾಜಿ ಕೇವಲ ರಾಜನಾಗಿರದೆ ಓರ್ವ ಆದರ್ಶ ವ್ಯಕ್ತಿಯಾಗಿದ್ದರು. ಕನ್ನಡ ನಾಡಿಗೂ ಶಿವಾಜಿ ಮಹಾರಾಜರಿಗೂ ಅವಿನಾಭಾವ ಸಂಬಂಧವಿದೆ. ಆರಂಭದಲ್ಲಿ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡಿಕೊಂಡಿದ್ದರು. ಕೆಳದಿ ಸಾಮ್ರಾಜ್ಯದ ಜತೆ ನಿಕಟ ಸಂಪರ್ಕ ಹೊಂದಿದ್ದರು ಎಂದು ಹೇಳಿದರು.

ಉಪ ತಹಸೀಲ್ದಾರ್ ಮಂಜುಳಾ ಭಜಂತ್ರಿ ಮಾತನಾಡಿ, ಶಿವಾಜಿ ಮಹಾರಾಜ ಧೈರ್ಯದ ಸಂಕೇತವಾಗಿದ್ದರು. ಅವರ ದೇಶಭಕ್ತಿಯನ್ನು ಪ್ರತಿಯೊಬ್ಬರೂ ಪರಿಪಾಲನೆ ಮಾಡಬೇಕು. ಮಹಿಳೆಯರ ಬಗ್ಗೆ ಅಪಾರ ಗೌರವ ಹೊಂದಿದ್ದ ಶಿವಾಜಿ ದೇಶ ಕಂಡ ಓರ್ವ ಶ್ರೇಷ್ಠ ರಾಜ ಎಂದು ತಿಳಿಸಿದರು.

ಮರಾಠ ಸಮಾಜದ ಅಧ್ಯಕ್ಷ ವಿಜಯಕುಮಾರ್ ಪಾಟೀಲ್, ಕೆ.ಆರ್.ನಾರಾಯಣ, ರವಿಪ್ರಕಾಶ್, ವಿ.ಟಿ.ಸ್ವಾಮಿ, ಮೋಹನ್ ಇತರರಿದ್ದರು.