ತರೀಕೆರೆ: ಇಂದಿನ ಸ್ವಾರ್ಥ ಸಮಾಜದಲ್ಲಿ ಸಾಮಾಜಿಕ ಕಾರ್ಯದಲ್ಲಿ ಹೃದಯ ವೈಶಾಲ್ಯತೆ ತೋರುವುದು ಅಪರೂಪ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಡಿ.ಪಿ.ರಾಜಪ್ಪ ಹೇಳಿದರು. ಪಟ್ಟಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ಗೆ ನಿವೇಶನ ಕೊಡುಗೆಯಾಗಿ ನೀಡಿದ ದಾನಿ ಶ್ಯಾಮಲಾ ಮಂಜುನಾಥ್ ಅವರನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನಿಂದ ಸನ್ಮಾನಿಸಿ ಮಾತನಾಡಿದರು. ದಾನ ಧರ್ಮದಲ್ಲಿ ತೊಡಗಿರುವ ಶ್ಯಾಮಲಾ ಮಂಜುನಾಥ್ ಅವರ ಸಾಮಾಜಿಕ ಕಾರ್ಯ ಇತರರಿಗೆ ಮಾದರಿ. ರಾಜ್ಯದ ಇತಿಹಾಸದಲ್ಲೇ ಕನ್ನಡ ಸಾಹಿತ್ಯ ಪರಿಷತ್‌ಗೆ ನಿವೇಶನ ದಾನ ನೀಡಿರುವುದು ಇದೇ ಮೊದಲು. ಉಳ್ಳವರು ಇವರ ಹಾದಿಯಲ್ಲಿ ಸಾಗಿದರೆ ಸಮಾಜದ ಏಳಿಗೆ ಸುಲಭವಾಗಲಿದೆ ಎಂದರು. ಗೌರವ ಕಾರ್ಯದರ್ಶಿ ನಾಗೇನಹಳ್ಳಿ ತಿಮ್ಮಯ್ಯ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಬಿ.ಎಸ್.ಭಗವಾನ್, ಪ್ರಮುಖರಾದ ಎಚ್.ಆರ್.ಚಂದ್ರಪ್ಪ, ಆರ್.ನಾಗೇಶ್, ಸಿ.ಎಂ.ಶಂಕರಪ್ಪ, ಉಮಾ, ನವೀನ್ ಮತ್ತಿತರರಿದ್ದರು.