ಸೊರಬದ ಅಂಬೇಡ್ಕರ್ ಬಡಾವಣೆಯ ನೇತಾಜಿ ಸುಭಾಷ್ ಚಂದ್ರ ಬೋಸ್ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ವನಮಹೋತ್ಸವ ನಡೆಯಿತು. ಡಿ.ಎಸ್.ಶಂಕರ್ ಶೇಟ್, ಸುಧಾಕರ, ಆಸ್ಮಾ ಪರ್ವೀನ್, ಶ್ರೀರಂಜಿನಿ, ಮಹೇಶ್ ಖಾರ್ವಿ ಇತರರಿದ್ದರು.  
ನ್ಯೂಸ್

ಎಲ್ಲರಲ್ಲೂ ಪರಿಸರ ಜಾಗೃತಿ ಮೂಡಲಿ

ಸೊರಬ: ಮನುಷ್ಯನ ದುರಾಸೆಯಿಂದ ಪರಿಸರದ ಮೇಲೆ ಒತ್ತಡ ಹೆಚ್ಚಾಗಿ ಸಕಲ ಜೀವರಾಶಿಗಳು ಅಪಾಯದ ಅಂಚಿನಲ್ಲಿವೆ ಎಂದು ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಎಸ್.ಶಂಕರ್ ಶೇಟ್ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಅಂಬೇಡ್ಕರ್ ಬಡಾವಣೆಯ ನೇತಾಜಿ ಸುಭಾಷ್‌ಚಂದ್ರ ಬೋಸ್ ಸರ್ಕಾರಿ ಉರ್ದು ಪ್ರೌಢಶಾಲೆ ಹಾಗೂ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗಾಳಿ, ಬೆಳಕು, ನೀರು ಹಾಗೂ ಆಮ್ಲಜನಕ ಪಡೆಯಲು ಗಿಡಮರಗಳನ್ನು ಹೆಚ್ಚಾಗಿ ಬೆಳೆಸಬೇಕಿದೆ. ದೇಶದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಮನುಷ್ಯ ಯಂತ್ರಗಳ ಮೂಲಕ ಗುಡ್ಡ, ಬೆಟ್ಟ ಕಾಡುಗಳನ್ನು ಕಡಿದು ಅಣೆಕಟ್ಟುಗಳನ್ನು ನಿರ್ಮಿಸಿದ ಪರಿಣಾಮ ಪರಿಸರ ವಿನಾಶದತ್ತ ಸಾಗಿದೆ ಎಂದರು.
ಮರ ಕಡಿದರೆ ಕೀಟಗಳು, ಪ್ರಾಣಿ ಪಕ್ಷಿಗಳು ನಾಶವಾಗುವ ಜತೆಗೆ ತಾಪಮಾನ ಏರಿಕೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಪರಿಸರದ ಮೇಲಾಗುತ್ತಿರುವ ಆಕ್ರಮಣ ಕುರಿತು ಜನಜಾಗೃತಿ ಮೂಡಿಸಬೇಕಿದೆ. ನಾವೆಲ್ಲರೂ ಜನ್ಮದಿನಾಚರಣೆ ನೆಪದಲ್ಲಿ ದುಂದು ವೆಚ್ಚ ಮಾಡದೆ ಗಿಡಗಳನ್ನು ನೆಡುವ ಮೂಲಕ ಪರಿಸರ ಕಾಳಜಿ ಮೆರೆಯಬೇಕು. ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಪರಿಸರದ ಅಳಿವು-ಉಳಿವಿನ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಬಿಇಒ ಪುಷ್ಪಾ ಮಾತನಾಡಿ, ಪ್ರತಿಯೊಬ್ಬರು ಪರಿಸರ ಬಿಟ್ಟು ಬದುಕಲು ಸಾಧ್ಯವಿಲ್ಲ. ಗಿಡ-ಮರಗಳನ್ನು ಹೆಚ್ಚಾಗಿ ಬೆಳೆಸುವುದರಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಹಾನಿಕರ. ಹಾಗಾಗಿ ಪ್ರತಿಯೊಬ್ಬರೂ ಪ್ಲಾಸ್ಟಿಕ್‌ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.
ಮುಖ್ಯ ಶಿಕ್ಷಕ ಸುಧಾಕರ, ಎಸ್‌ಡಿಎಂಸಿ ಅಧ್ಯಕ್ಷೆ ಆಸ್ಮಾ ಪರ್ವೀನ್, ಪುರಸಭಾ ಸದಸ್ಯರಾದ ಶ್ರೀರಂಜಿನಿ, ಮಹೇಶ್ ಖಾರ್ವಿ, ಬಸೀರ್ ಕೋಡ್, ನೀಲಕಂಠಸ್ವಾಮಿ, ಕೆ.ಎಸ್.ರಮೇಶ್, ಇಲಿಯಾಸ್ ಅಹಮದ್, ರಮೇಶ್ ಕಲ್ಲಂಬಿ ಹಾಗೂ ಶಾಲಾ ಮಕ್ಕಳು ಪಾಲ್ಗೊಂಡಿದ್ದರು.