ನ್ಯೂಸ್

ಕನ್ನಡ ರಾಜ್ಯೋತ್ಸವ ಮೆರವಣಿಗೆಗೆ ನಿರ್ಬಂಧ, ಮಾರ್ಗಸೂಚಿ ಹೀಗಿದೆ

arunakunigal

ಬೆಂಗಳೂರು: ಕರೊನಾ ಸೋಂಕು ಹಬ್ಬುವುದನ್ನು ತಡೆಯಲು, ರಾಜ್ಯದ ಜನತೆ ಹಿತದೃಷ್ಟಿಯಿಂದ ಈ ಬಾರಿ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಸರಳ ಮತ್ತು ಗೌರವ ಪೂರ್ವಕವಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ರಾಜ್ಯೋತ್ಸವ ನಿಮಿತ್ತ ನಡೆಸುವ ಮೆರವಣಿಗೆಗೆ ನಿರ್ಬಂಧ ವಿಧಿಸಲಾಗಿದ್ದು, ಗರಿಷ್ಠ 100 ಜನರಿಗೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.

ಸಂಘ-ಸಂಸ್ಥೆಗಳು ರಾಜ್ಯೋತ್ಸವ ಆಚರಣೆಗೆ ಪೊಲೀಸ್, ಸ್ಥಳೀಯ ಸಂಸ್ಥೆ ಸೇರಿ ಸಂಬಂಧಿಸಿದ ಇಲಾಖೆಗಳ ಪೂರ್ವಾನುಮತಿ ಪಡೆಯುವುದು ಕಡ್ಡಾಯಗೊಳಿಸಲಾಗಿದೆ. ನ.1ರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸೀಮಿತವಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಶುಕ್ರವಾರ ಹೊರಡಿಸಿದ ಮಾರ್ಗಸೂಚಿಯಲ್ಲಿ ಈ ವಿಷಯ ತಿಳಿಸಿದ್ದಾರೆ.

ಮಾರ್ಗಸೂಚಿಯಲ್ಲಿ ಏನಿದೆ?

  1. ಮಾಸ್ಕ್, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಪಾಲನೆ ಕಡ್ಡಾಯ
  2. ಸಾಮಾಜಿಕ ಅಂತರವಿಲ್ಲದೆ ಏರ್ಪಡಿಸುವ ಕಾರ್ಯಕ್ರಮಗಳ ನಿಷೇಧ
  3. ಶಾಂತಿ, ಸೌಹಾರ್ದತೆ, ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರಬಾರದು
  4. ಕನಿಷ್ಠ ಪ್ರಮಾಣದ ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮಗಳಿಗೆ ಅವಕಾಶ
  5. ಸಣ್ಣ ಮಕ್ಕಳು, ಹಿರಿಯ ನಾಗರಿಕರು, ಅನಾರೋಗ್ಯ/ ಸೋಂಕು ಸಾಧ್ಯತೆಯುಳ್ಳವರು ರಾಜ್ಯೋತ್ಸವದಲ್ಲಿ ಭಾಗವಹಿಸದಂತೆ ಎಚ್ಚರವಹಿಸುವುದು
  6. ಸಾರ್ವಜನಿಕ ಆರೋಗ್ಯ ಹಿತದೃಷ್ಟಿಯ ಆದೇಶ, ಸೂಚನೆಗಳ ಪಾಲನೆ ಕಡ್ಡಾಯ