ನ್ಯೂಸ್

ನಾಮಫಲಕದಲ್ಲಿ ಕನ್ನಡ ಸರಿಪಡಿಸಲು ಪ್ರಾಧಿಕಾರದ ಸಹಾಯ

ಶ್ರೀಕಾಂತ್ ಶೇಷಾದ್ರಿ

ಬೆಂಗಳೂರು: ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ)ಅಧಿನಿಯಮ 2024 ರ 17ನೇ ಪ್ರಕರಣದಲ್ಲಿನ (6)ನೇ ಉಪಪ್ರಕರಣದ ಅನ್ವಯ ಶೇ.60 ರಷ್ಟು ಕನ್ನಡ ನಾಮಫಲಕ ಅಳವಡಿಸುವುದು ರಾಜ್ಯಾದ್ಯಂತ ಕಡ್ಡಾಯವಾಗಿದೆ.

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ಸ್ವಾಯತ್ತ ಸಂಸ್ಥೆಗಳು, ಸಹಕಾರ ಮತ್ತು ಸಾರ್ವಜನಿಕ ಉದ್ಯಮಗಳು, ಶೈಕ್ಷಣಿಕ ಸಂಸ್ಥೆಗಳು, ಬ್ಯಾಂಕ್‌ಗಳು, ಇತರೆ ಹಣಕಾಸು ಸಂಸ್ಥೆಗಳು, ಖಾಸಗಿ ಕೈಗಾರಿಕೆಗಳು, ವಿಶ್ವವಿದ್ಯಾಲಯಗಳು, ಸ್ಥಳೀಯ ಪ್ರಾಧಿಕಾರಗಳ ಅನುಮೋದನೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ವಾಣಿಜ್ಯ, ಕೈಗಾರಿಕೆ, ವ್ಯಾಪಾರ ಸಂಸ್ಥೆಗಳು, ಪ್ರಯೋಗಾಲಯಗಳು, ಮನರಂಜನ ಕೇಂದ್ರ, ಹೋಟೆಲ್ ಮುಂತಾದವುಗಳ ಹೆಸರುಗಳನ್ನು ಪ್ರದರ್ಶಿಸಲು ನಾಮಫಲಕದ ಮೇಲ್ಭಾಗದಲ್ಲಿ ಶೇ. 60 ರಷ್ಟು ಕನ್ನಡ ಕಡ್ಡಾಯವಾಗಿ ಇರಬೇಕು.

ಉಳಿದಂತೆ ಕನ್ನಡದ ಹೊರತಾಗಿ ಬೇರೊಂದು ಭಾಷೆಯನ್ನು ನಾಮಫಲಕದಲ್ಲಿ ಬಳಸಲು ಅಪೇಕ್ಷಿಸಿದರೆ ಕನ್ನಡ ಭಾಷೆಯ ಬಳಕೆಯ ನಂತರ, ಇತರೆ ಭಾಷೆಯನ್ನು ಶೇ. 40ರಷ್ಟು ಬಳಸಬಹುದಾಗಿದೆ. ನಾಮಫಲಕಗಳು ಪ್ರಮುಖವಾಗಿ ಕನ್ನಡದಲ್ಲಿ ಇರತಕ್ಕದ್ದು ಎಂದು ಅಧಿನಿಯಮದಲ್ಲಿ ರಾಜ್ಯ ಸರ್ಕಾರ ಆದೇಶಿಸಿದೆ.

ಪ್ರಸ್ತುತ ಕೆಲವು ಅಂಗಡಿ ಮಾಲೀಕರು, ವ್ಯಾಪಾರ ಸಂಸ್ಥೆಗಳು, ಸಾರ್ವಜನಿಕರು ನಾಮಫಲಕಗಳಲ್ಲಿ ಕನ್ನಡ ಪದಗಳನ್ನು ತಪ್ಪು ತಪ್ಪಾಗಿ ಬರೆಯಿಸಿ ಅಳವಡಿಸುತ್ತಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಸರ್ಕಾರಕ್ಕೆ ಮತ್ತು ಪ್ರಾಧಿಕಾರಕ್ಕೆ ದೂರುಗಳನ್ನು ಸಲ್ಲಿಸುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಡ್ಡಾಯವಾಗಿ, ತಪ್ಪಿಲ್ಲದೆ ಸರಿಯಾದ ಕನ್ನಡದಲ್ಲಿ ನಾಮಫಲಕ ಅಳವಡಿಸುವಂತೆ ಸೂಚಿಸಿದೆ.

ಸರಿಯಾದ ಕನ್ನಡದಲ್ಲಿ ನಾಮಫಲಕವನ್ನು ಅಳವಡಿಸಲು ಪ್ರಾಧಿಕಾರದ ಸಹಾಯದ ಅಗತ್ಯವಿದ್ದರೆ ಪ್ರಾಧಿಕಾರವನ್ನು ದೂರವಾಣಿ: 080-22286773 ಅಥವಾ 22256365 (ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 5:30 ರವರೆಗೆ) ಸಂಪರ್ಕಿಸಬಹುದು. ಪ್ರಾಧಿಕಾರವು ಸೂಕ್ತ ಸಲಹೆ ಮಾರ್ಗದರ್ಶನ ನೀಡಲು ಸಿದ್ಧವಿದೆ ಎಂದು ಪ್ರಕಟಣೆ ತಿಳಿಸಿದೆ.