ಹುಣಸೂರು ತಾಲೂಕು ಡೀಡ್ ಸಂಸ್ಥೆ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ಹರಿಹರ ಆನಂದಸ್ವಾಮಿ, ವಿಠಲ್, ಪ್ರಕಾಶ್, ಪಿ.ಕೆ.ರಾಮು, ಬೊಮ್ಮಿ ಇತರರಿದ್ದರು. 
ನ್ಯೂಸ್

ಕನ್ನಡ ನಾಡು ದಾರ್ಶನಿಕರ ಪುಣ್ಯಭೂಮಿ

ಹುಣಸೂರು: ನಗರದ ಡೀಡ್ ಸಂಸ್ಥೆ ಆವರಣದಲ್ಲಿ ಗುರುವಾರ ಕನಕದಾಸರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ್ ಮಾತನಾಡಿ, ಈ ನೆಲ ಹಲವು ದಾರ್ಶನಿಕರ ಪುಣ್ಯ ಭೂಮಿಯಾಗಿದೆ. ಇಂದಿನ ಚಳವಳಿಗಾರರು ಮತ್ತು ಸಾಮಾಜಿಕ ಕಾರ್ಯಕರ್ತರು ದಾರ್ಶನಿಕರ ಮಾರ್ಗದರ್ಶನದಲ್ಲಿಯೇ ಎಲ್ಲ ಸಮುದಾಯಗಳನ್ನು ಪ್ರೀತಿಯಿಂದ ಕಂಡು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲ ಸಮುದಾಯಗಳಿಗೂ ಸಮಾನ ಅವಕಾಶ ಮತ್ತು ಗೌರವಯುತ ಬದುಕು ರೂಪಿಸಿಕೊಳ್ಳಲು ನೆರವಾಗುವ ಅನಿವಾರ್ಯತೆಯಿದೆ. ಈ ಎಲ್ಲಕ್ಕೂ ಕನಕದಾಸರ ಚಿಂತನೆಗಳೇ ನಮಗೆ ಪ್ರೇರಣೆಯಾಗಿವೆ ಎಂದರು.

ದಲಿತ ಚಳವಳಿ ನವ ನಿರ್ಮಾಣ ವೇದಿಕೆಯ ಮುಖ್ಯಸ್ಥ ಹರಿಹರ ಆನಂದಸ್ವಾಮಿ ಮಾತನಾಡಿ, ಈ ನಾಡಿನಲ್ಲಿ ಬಸವ, ಕನಕ, ಪುರಂದರದಾಸರು, ವಿವೇಕಾನಂದರು, ಮಹಾತ್ಮ ಗಾಂಧಿ, ಅಂಬೇಡ್ಕರ್, ಕುವೆಂಪು ಅವರು ಸಾಲು ಸಾಲಾಗಿ ಮಾನವನ ಶ್ರೇಯಸ್ಸನ್ನು ಬಯಸಿ ಈ ನಾಡಿಗಾಗಿ ಶ್ರಮಿಸಿದರು. ಆದರೆ ಈಗ ನಾವು ಇಂತಹ ದಾರ್ಶನಿಕರನ್ನು ಜಾತಿ ಮೂಸೆಯಲ್ಲಿಟ್ಟು ಕುಬ್ಜ ಮಾಡಲು ಹೊರಟಿರುವುದು ನಾವು ಮಾಡುತ್ತಿರುವ ತಪ್ಪು. ಇದನ್ನು ಸರಿಪಡಿಸಿಕೊಳ್ಳದಿದ್ದರೆ ನಮ್ಮಲ್ಲಿರುವ ಗೊಂದಲಗಳು ಬಗೆಹರಿಯುವುದಿಲ್ಲ ಎಂದು ಬೇಸರಿಸಿದರು.

ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಪಿ.ಕೆ.ರಾಮು ಮಾತನಾಡಿ, ಅವಮಾನವನ್ನು ಸಹಿಸದೆ ಸಿಡಿದೆದ್ದು ಕನಕದಾಸರು ಸಮಾಜದ ಒಳಿತಿಗಾಗಿ ಹಾಡಿದ ಕೀರ್ತನೆಗಳು ನಮಗೆ ದಾರಿದೀಪ ಎಂದರು. ಸಭೆಯಲ್ಲಿ ಪ್ರಮುಖರಾದ ವಿಠಲ್ ನಾಣಚ್ಚಿ, ಬೊಮ್ಮಿ, ಮಗ್ಗೇಶ, ಪ್ರಕಾಶ್, ರಕ್ಷಿತ, ಮಂಜು ಹಾಜರಿದ್ದರು.