ನ್ಯೂಸ್

ಅರ್ಜುನ್ ಜನ್ಯಗೆ ಹೃದಯಾಘಾತ, ಚೇತರಿಕೆ

ಮೈಸೂರು: ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗೆ ಹೃದಯಾಘಾತವಾಗಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ 4 ದಿನದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಾಯಕ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿವಾಹದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿದೆ. ಬಳಿಕ ಎದೆ ನೋವು ಕಂಡುಬಂದ ಹಿನ್ನೆಲೆ ಭಾನುವಾರ ಆಸ್ಪತ್ರೆಗೆ ದಾಖಲಾಗಿದ್ದರು. ಅರ್ಜುನ್ ಜನ್ಯ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದು, ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ತಜ್ಞ ವೈದ್ಯೆ ಡಾ.ಅದಿತಿ ಉಡುಪ ನೇತೃತ್ವದಲ್ಲಿ ಸ್ಪೆಷಲ್ ವಾರ್ಡ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅರ್ಜುನ್ ಜನ್ಯ ಅವರಿಗೆ ಬುಧವಾರ ಮುಂಜಾನೆ ಆಂಜಿಯೋಗ್ರಾಂ, ಆಂಜಿಯೋಪ್ಲಾಸ್ಟಿ ಮಾಡಲಾಯಿತು. ಹೃದಯಭಾಗದ ರಕ್ತ ನಾಳಗಳು ಶೇ.99 ಬ್ಲಾಕ್ ಆಗಿದ್ದವು. ಸರಿಯಾದ ಸಮಯಕ್ಕೆ ಚಿಕಿತ್ಸೆಗೆ ದಾಖಲಾಗಿದ್ದರಿಂದ ಸೇಫ್ ಆಗಿದ್ದಾರೆ. ಇನ್ನೆರೆಡು ದಿನದಲ್ಲಿ ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದು ಡಾ.ಅದಿತಿ ಉಡುಪ ತಿಳಿಸಿದ್ದಾರೆ.