ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ’ ಚಿತ್ರದ ಸೀಕ್ವಲ್ ಯಾವಾಗ ಶುರು? ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಅದಕ್ಕೆ ಇತ್ತೀಚೆಗಷ್ಟೆ ನಿರ್ವಪಕ ವಿಜಯ್ ಕಿರಗಂದೂರು ಸ್ಪಷ್ಟನೆ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ‘ಕಾಂತಾರ 2’ ಬಗ್ಗೆ ಮಾಹಿತಿ ನೀಡಿರುವ ಅವರು, ‘ರಿಷಬ್ ಶೆಟ್ಟಿ ಸದ್ಯ ತಮ್ಮ ತಂಡದೊಂದಿಗೆ ಕರಾವಳಿಯಲ್ಲಿ ಬೀಡು ಬಿಟ್ಟಿದ್ದಾರೆ. ರೀಸರ್ಚ್ ಮಾಡುತ್ತಾ ಕಥೆಯ ಸಿದ್ಧತೆಯಲ್ಲಿ ತೊಡಗಿದ್ದಾರೆ. ಚಿತ್ರದ ಬಹುಭಾಗ ಮಳೆಗಾಲದಲ್ಲಿ ನಡೆಯುವ ಕಾರಣ, ಜೂನ್ನಲ್ಲಿ ಕಾಂತಾರ 2 ಚಿತ್ರದ ಚಿತ್ರೀಕರಣ ಪ್ರಾರಂಭಿಸುವ ಸಾಧ್ಯತೆಯಿದೆ. ಮುಂದಿನ ವರ್ಷ ಏಪ್ರಿಲ್ ಅಥವಾ ಮೇ ಹೊತ್ತಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಮಾಡುವ ಆಲೋಚನೆಯಿದೆ’ ಎಂದು ಹೇಳಿಕೊಂಡಿದ್ದಾರೆ.
‘ಕಾಂತಾರ 2’, ಮೊದಲ ಚಿತ್ರದ ಪ್ರೀಕ್ವಲ್ (ಹಿಂದಿನ ಕಥೆ) ಆಗಿರಲಿದ್ದು, ಪಂಜುರ್ಲಿ, ಗುಳಿಗ ದೈವಗಳ ಹಿನ್ನೆಲೆಯನ್ನು ಹೇಳುವ ಪ್ರಯತ್ನ ಚಿತ್ರತಂಡ ಮಾಡಲಿದೆ. ಮೊದಲ ಚಿತ್ರಕ್ಕಿಂತ ದೊಡ್ಡ ಬಜೆಟ್ನಲ್ಲಿ ಎರಡನೇ ಚಿತ್ರವನ್ನು ಪ್ಲಾನ್ ಮಾಡಲಾಗುತ್ತಿದೆ. ‘ಕಾಂತಾರ’ ಎಷ್ಟರ ಮಟ್ಟಿಗೆ ಸಕ್ಸಸ್ ಆಗಿತ್ತೆಂದರೆ, ಅದರ ಮುಂದಿನ ಭಾಗದ ಬಗ್ಗೆ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿದೆ. ಹೀಗಾಗಿಯೇ ಮೊದಲ ಭಾಗಕ್ಕಿಂದ ದೊಡ್ಡ ಬಜೆಟ್ನಲ್ಲಿ, ದೊಡ್ಡ ಮಟ್ಟದಲ್ಲಿ ‘ಕಾಂತಾರ 2’ ಮೂಡಿಬರಲಿದೆ. ಕೆಲವು ಹೊಸ ಪಾತ್ರಗಳು ಚಿತ್ರತಂಡ ಸೇರಿಕೊಳ್ಳಲಿವೆ. ಆದರೆ, ಕಥಾವಸ್ತು ಮತ್ತು ಶೈಲಿ ಮೊದಲ ಚಿತ್ರದಂತೆಯೇ ಇರಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ ಹೊಂಬಾಳೆ ಫಿಲಂಸ್ನ ವಿಜಯ್ ಕಿರಗಂದೂರು. - ಏಜೆನ್ಸೀಸ್