| ರಮೇಶ ದೊಡ್ಡಪುರ ಬೆಂಗಳೂರು
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ, ಎಲ್ಲ ರಂಗಗಳಲ್ಲೂ ಕನ್ನಡ ಬಳಕೆ ಕಡ್ಡಾಯ ಎಂದು ಸರ್ಕಾರಗಳು ಎಷ್ಟೇ ಆದೇಶ, ಸುತ್ತೋಲೆ ಹೊರಡಿಸಿದರೂ ಬ್ಯಾಂಕ್ಗಳ ಕನ್ನಡ ನಿರ್ಲಕ್ಷ್ಯ ಧೋರಣೆ ಮಾತ್ರ ಬದಲಾಗಿಲ್ಲ. ಗ್ರಾಹಕರೊಂದಿಗೆ ಕನ್ನಡದಲ್ಲಿ ವ್ಯವಹರಿಸುವುದನ್ನು ಕಡೆಗಣಿಸಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾದ ಬ್ಯಾಂಕ್ಗಳೀಗ ಎಟಿಎಂಗಳಲ್ಲಿ ಕನ್ನಡ ಬಳಕೆಯನ್ನೇ ಕೈಬಿಟ್ಟು 2020ರ ವರ್ಷವನ್ನು ಮುಗಿಸುವತ್ತ ಹೆಜ್ಜೆ ಇಟ್ಟಂತಿದೆ. ಈ ಧೋರಣೆಯಿಂದಾಗಿ ಅನ್ಯಭಾಷೆ ತಿಳಿಯದ ಕನ್ನಡಿಗರು ಎಟಿಎಂ ನಿರ್ವಹಣೆಗೆ ಇತರರ ಸಹಾಯ ಪಡೆಯಬೇಕಾದ ಪರಿಸ್ಥಿತಿ ನಿರ್ವಣವಾಗಿರುವುದರಿಂದ ವಂಚ ನೆಯ ಆತಂಕ ಇಮ್ಮಡಿಗೊಂಡಿದೆ.
ಕನ್ನಡ ಬಳಕೆ ಹೆಚ್ಚಿಸುವ ಅನೇಕ ಕಾರ್ಯಕ್ರಮಗಳ ಜತೆಗೆ ಕನ್ನಡ ಕಾಯಕ ವರ್ಷ ಆಚರಣೆಯ ಸಂದರ್ಭದಲ್ಲೇ ಬಹುತೇಕ ಎಟಿಎಂಗಳಲ್ಲಿ ಕನ್ನಡದಲ್ಲಿದ್ದ ಆಯ್ಕೆಯೇ ಮಾಯವಾಗಿದೆ. ಅನೇಕ ವರ್ಷಗಳ ಹೋರಾಟದ ಬಳಿಕ ಪಡೆದಿದ್ದ ಭಾಷೆ ಆಯ್ಕೆ ಹಕ್ಕನ್ನು ಸದ್ದಿಲ್ಲದೆ ಕಿತ್ತುಕೊಳ್ಳಲಾಗುತ್ತಿದೆ. ಇ-ಮಾರ್ಕೆಟಿಂಗ್ ಹಾಗೂ ಆಪ್ ಆಧಾರಿತ ಸಾರಿಗೆ ಸಂಸ್ಥೆಗಳು ಕನ್ನಡ ಬಳಸುತ್ತಿವೆ ಎಂಬ ಆಶಾಭಾವನೆ ನಡುವೆಯೇ ಬ್ಯಾಂಕ್ಗಳು ಹಿಮ್ಮುಖ ಚಲನೆಯಲ್ಲಿವೆ. ಇದು ರಾಜ್ಯ ಅಳವಡಿಸಿಕೊಂಡಿರುವ ತ್ರಿಭಾಷಾ ಸೂತ್ರಕ್ಕೆ ವಿರುದ್ಧವಾಗಿದೆ.
ಕಾನೂನು ಹೇಳೋದೇನು?: ಕರ್ನಾಟಕ ಅಳವಡಿಸಿಕೊಂಡಿರುವ ತ್ರಿಭಾಷಾ ಸೂತ್ರದ ಅನ್ವಯ, ರಾಜ್ಯದಲ್ಲಿ ಕೆಲಸ ಮಾಡುವ ಕೇಂದ್ರ, ರಾಜ್ಯ ಸರ್ಕಾರಗಳ ಇಲಾಖೆ, ಉದ್ಯಮಗಳು, ಖಾಸಗಿ ಉದ್ಯಮ ಸಂಸ್ಥೆಗಳು ಕನ್ನಡಕ್ಕೆ ಅಗ್ರಸ್ಥಾನ ನೀಡಬೇಕು. ಗ್ರಾಹಕರಿಗೆ ಅರ್ಥವಾಗುವ ಭಾಷೆಯಲ್ಲಿ ಸೇವೆ ಹಾಗೂ ಜಾಹೀರಾತನ್ನು ನೀಡಬೇಕೆಂಬುದು ಕಾರ್ವಿುಕ ಇಲಾಖೆ ಕಾನೂನಿನಲ್ಲೂ ಇದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಗಿಂದಾಗ್ಗೆ ಇಲಾಖೆಗಳಿಗೆ ಭೇಟಿ ನೀಡಿ ಹಾಗೂ ಸುತ್ತೋಲೆಗಳ ಮೂಲಕ ಈ ಕುರಿತು ಜಾಗೃತಿ ಹಾಗೂ ಎಚ್ಚರಿಕೆ ನೀಡುತ್ತಿರುತ್ತದೆ. ಆದರೂ ಬ್ಯಾಂಕ್ಗಳು ಎಟಿಎಂನಿಂದ ಕನ್ನಡವನ್ನು ಸದ್ದಿಲ್ಲದೆ ತೆಗೆದಿವೆ.
ಒಂದೇ ಬ್ಯಾಂಕ್ನಲ್ಲಿ ವ್ಯತ್ಯಾಸ: ಮತ್ತೊಂದು ಅಚ್ಚರಿಯ ವಿಚಾರವೆಂದರೆ ಒಂದೇ ಬ್ಯಾಂಕ್ನ ಬೇರೆ ಬೇರೆ ಎಟಿಎಂಗಳಲ್ಲಿ ಭಾಷೆ ಆಯ್ಕೆಯಲ್ಲಿ ವ್ಯತ್ಯಾಸವಿದೆ. ಬ್ಯಾಂಕ್ ಆಫ್ ಬರೋಡಾದ ಕಾಟನ್ಪೇಟೆ ಎಟಿಎಂನಲ್ಲಿ ಹಿಂದಿ ಹಾಗೂ ಇಂಗ್ಲಿಷ್ ಮಾತ್ರ ಇದ್ದರೆ, ಚಾಮರಾಜಪೇಟೆ ಎಟಿಎಂನಲ್ಲಿ ಮೂರೂ ಭಾಷೆ ನೀಡಲಾಗಿದೆ. ಶೇಷಾದ್ರಿಪುರದಲ್ಲಿ ಒಂದೇ ಕೋಣೆಯಲ್ಲಿರುವ ಕೆನರಾ ಬ್ಯಾಂಕ್ನ ಎರಡು ಎಟಿಎಂಗಳಲ್ಲಿ ಒಂದು ಇಂಗ್ಲಿಷ್ ಹಾಗೂ ಹಿಂದಿ ಮಾತ್ರ ನೀಡಿದರೆ ಮತ್ತೊಂದರಲ್ಲಿ ಮೂರೂ ಭಾಷೆಗಳಿವೆ. ಕೆಲವು ಹಳೆಯ ಎಟಿಎಂಗಳಲ್ಲಿ ಕನ್ನಡ ಇರುವುದನ್ನು ಗಮನಿಸಿದರೆ, ಹೊಸ ಯಂತ್ರಗಳಲ್ಲಿ ಭಾಷೆ ಆಯ್ಕೆಯನ್ನು ಕೈಬಿಟ್ಟಿರುವುದು ಗಮನಕ್ಕೆ ಬರುತ್ತದೆ.
ಗ್ರಾಹಕರಿಗೆ ವಂಚಕರ ಆತಂಕ: ಕನ್ನಡ ಮಾತ್ರ ಓದಲು ಬರುವ ಗ್ರಾಹಕರು ಎಟಿಎಂನಲ್ಲಿ ವ್ಯವಹರಿಸುವಾಗ ಇಂಗ್ಲಿಷ್ ನೋಡಿ ತಬ್ಬಿಬ್ಬಾಗುತ್ತಾರೆ. ಅಂತಹ ಸಮಯಕ್ಕೇ ಹೊಂಚು ಹಾಕುವ ಖದೀಮರು, ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್, ಪಾಸ್ವರ್ಡ್ ಪಡೆದು ಮುಗ್ಧರಿಗೆ ವಂಚಿಸಿರುವ ಅನೇಕ ಪ್ರಕರಣಗಳು ದಾಖಲಾಗಿವೆ. ಈ ಹಿಂದೆ ಎಟಿಎಂ ಎಂದರೆ ಹಣ ಹಿಂಪಡೆಯಲು ಮಾತ್ರ ಬಳಕೆಯಾಗುತ್ತಿದ್ದವು. ಈಗ ಹಣ ಠೇವಣಿ ಇಡಲು, ವರ್ಗಾವಣೆ ಮಾಡಲು, ವಿದ್ಯುತ್ ಹಾಗೂ ನೀರಿನ ಬಿಲ್ ಪಾವತಿಸಲು ಸೇರಿ ಅನೇಕ ಆಯ್ಕೆಗಳನ್ನು ನೀಡಲಾಗಿದೆ. ಕನ್ನಡದಲ್ಲೇ ಆಯ್ಕೆ ನೀಡಿದರೆ ಅರ್ಥಮಾಡಿಕೊಂಡು ಸ್ವಯಂ ವ್ಯವಹರಿಸುವ ಮೂಲಕ ತಮಗಾಗುವ ವಂಚನೆಯನ್ನು ಗ್ರಾಹಕರು ತಡೆಗಟ್ಟಬಹುದು.
ಕನ್ನಡ ಕಾಯಕ ವರ್ಷ: ಕನ್ನಡ ಬಳಕೆ ಹೆಚ್ಚಿಸಲು ಸಾರ್ವಜನಿಕ ಸಹಭಾಗಿತ್ವದಲ್ಲಿ ಇಡೀ ವರ್ಷವನ್ನು ಕನ್ನಡ ಕಾಯಕ ವರ್ಷ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಸಿಎಂ ಬಿ.ಎಸ್. ಯಡಿಯೂರಪ್ಪ ಈ ಆಚರಣೆಗೆ ಚಾಲನೆ ನೀಡಿದ್ದರು. 9 ವಿಭಾಗಗಳಲ್ಲಿ 95 ಅಂಶಗಳನ್ನು ಜಾರಿ ಮಾಡಲು ಮುಂದಾಗಿದೆ. ಕೇಂದ್ರ ಸರ್ಕಾರ ಹಾಗೂ ಖಾಸಗಿ ಉದ್ಯಮಗಳು ಸಾರ್ವಜನಿಕರೊಂದಿಗೆ ಎಲ್ಲ ವ್ಯವಹಾರಗಳನ್ನೂ ಕನ್ನಡದಲ್ಲೆ ನಡೆಸಬೇಕು, ತಂತ್ರಾಂಶದಲ್ಲಿ ಕನ್ನಡಕ್ಕೆ ಮಹತ್ವ ಇರಬೇಕು ಎಂದು ಕಾಯಕ ವರ್ಷದ ಕೈಗನ್ನಡಿಯಲ್ಲಿ ತಿಳಿಸಲಾಗಿದೆ.
ಎಟಿಎಂಗಳಲ್ಲಿ ಕನ್ನಡದ ಆಯ್ಕೆ ನೀಡದಿರುವುದು ನೆಲದ ಕಾನೂನು ಹಾಗೂ ಸರ್ಕಾರದ ಆದೇಶಗಳ ಸ್ಪಷ್ಟ ಉಲ್ಲಂಘನೆ. ಎಟಿಎಂ ಸೇರಿ ಎಲ್ಲ ಸೇವೆಗಳಲ್ಲಿ ಕನ್ನಡ ಬಳಸುತ್ತಿದ್ದೇವೆ ಎನ್ನುವ ಬ್ಯಾಂಕ್ಗಳು ಸುಳ್ಳು ಹೇಳಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಕನ್ನಡ ಅಳವಡಿಸದಿದ್ದರೆ ಎಟಿಎಂಗಳನ್ನು ಮುಚ್ಚಿಸಬೇಕಾಗುತ್ತದೆ. | ಟಿ.ಎಸ್. ನಾಗಾಭರಣ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗ್ರಾಹಕರ ಸಮಸ್ಯೆಗಳೇನು?
ಬ್ಯಾಂಕ್ಗಳ ವಾದವೇನು?
ತಾಂತ್ರಿಕ ದೋಷ
ಕನ್ನಡ ಬಳಕೆ ಇಲ್ಲ ಎಂದರೆ