ನ್ಯೂಸ್

ಕನ್ನಡ ಭಾಷೆ ಮೈಗೂಡಿಸಿಕೊಂಡು ಕನ್ನಡವನ್ನು ಬೆಳೆಸಬೇಕು; ಎಚ್.ಡುಂಡಿರಾಜ್

ಮಡಿಕೇರಿ: ವಿದ್ಯಾರ್ಥಿಗಳು ಕೂಡ ದೈನಂದಿನ ಚಟುವಟಿಕೆಗಳಲ್ಲಿ ಕನ್ನಡ ಭಾಷೆ ಮೈಗೂಡಿಸಿಕೊಂಡು ಕನ್ನಡವನ್ನು ಬೆಳೆಸಬೇಕು ಎಂದು ಕವಿ, ಲೇಖಕರ ಹಾಗೂ ಸಂಗೀತಗಾರ ಎಚ್.ಡುಂಡಿರಾಜ್ ಕಿವಿಮಾತು ಹೇಳಿದರು.


ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಗುರುವಾರ ಉತ್ಥಾನ ಇದು ಕನ್ನಡ ಕಲಿಗಳ ಗುಣಗಾನ ಎಂಬ ಶಿರ್ಷಿಕೆಯಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಕೊಡಗಿನಲ್ಲಿ ಈ ರೀತಿಯ ಅತೀ ವರ್ಣ ರಂಜಿತ ಕಾರ್ಯಕ್ರಮನ್ನು ಆಯೋಜಿಸಿರುವುದನ್ನು ಶ್ಗಾಘನೀಯ. ಇಂತಹ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ವೈವಿದ್ಯಮಯವಾಗಿ ವಸ್ತು ಪ್ರದರ್ಶನದ ಮೂಲಕ ಆಯೋಜನೆ ಮಾಡಿರುವುದನ್ನು ವರ್ಣಿಸಿ ತಮ್ಮ ಹಾಸ್ಯ, ಚುಟುಕು, ಹನಿಗವನಗಳ ಮೂಲಕ ನೆರೆದಿದ್ದ ವೈದ್ಯಕೀಯ ವಿದ್ಯಾರ್ಥಿಗಳನ್ನು ರಂಜಿಸಿದರು. ಕನ್ನಡ ಭಾಷೆಯ ಶಕ್ತಿ, ಸಾಹಿತ್ಯ ಅದರ ವ್ಯಾಪ್ತಿಯನ್ನು ತಮ್ಮ ಕವನಗಳ ಮೂಲಕ ತಿಳಿಸುತ್ತಾ ವೈದ್ಯಕೀಯ ವಿದ್ಯಾರ್ಥಿಗಳು ಕೂಡ ದೈನಂದಿನ ಚಟುವಟಿಕೆಗಳಲ್ಲಿ ಕನ್ನಡ ಭಾಷೆ ಮೈಗೂಡಿಸಿಕೊಂಡು ಕನ್ನಡವನ್ನು ಬೇಳೆಸಲು ಕರೆ ನೀಡಿದರು.


ಈ ಸಾಲಿನ ಕನ್ನಡ ರಾಜ್ಯೋತ್ಸವದ ವಿಷಯ ಕರ್ನಾಟಕವನ್ನು ಆಳಿದ ರಾಜಮನೆತನಗಳ ಕೊಡುಗೆಯನ್ನು ಬಿಂಬಿಸುವ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಲೆ, ಸಂಸ್ಕೃತಿ, ವಾಸ್ತುಶಿಲ್ಪಗಳ ಬಗ್ಗೆ ಅರಿವು ಮೂಡಿಸಲು ಬಿತ್ತಿಚಿತ್ರಗಳು, ಮಾಡೆಲ್‌ಗಳ ವಸ್ತು ಪ್ರದರ್ಶನ ನಡೆಸಲಾಯಿತು.


ಕಾರ್ಯಕ್ರಮದಲ್ಲಿ ಯಕ್ಷಗಾನ, ಹೊಯ್ಸಳರ ನಾಟಕ, ತೆನಾಲಿರಾಮ ನಾಟಕ, ಹುಲಿ ವೇಷ, ಉಮ್ಮತಾಟ್, ಕಂಸಾಳೆ ಹೀಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಹತ್ತು ದಿನಗಳ ಕಾಲ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಈ ಸಂದರ್ಭದಲ್ಲಿ ಎಚ್.ಡುಂಡಿರಾಜ್ ರವರನ್ನು ಸನ್ನಾನಿಸಲಾಯಿತು.


ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ವಿಶಾಲ್ ಕುಮಾರ್, ಮುಖ್ಯ ಆಡಳಿತಾಧಿಕಾರಿ ಡಾ.ನಂಜುಂಡೇಗೌಡ, ಆರ್ಥಿಕ ಸಲಹೆಗಾರ ಆನಂದ, ಸಂಸ್ಥೆಯ ನಿರ್ದೆಶಕ ಡಾ. ಕೆ.ಬಿ.ಕಾರ್ಯಪ್ಪ ಮಾತನಾಡಿದರು. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ.ಜಯಲಕ್ಷ್ಮಿ ಪಾಟ್ಕರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ನಂಜುಂಡಯ್ಯ, ಹಿರಿಯ ವೈದ್ಯ ಡಾ. ಪಾಟ್ಕರ್, ಕನ್ನಡ ಸಂಘದ ಪ್ರಮುಖರಾದ ಡಾ.ಎಂ.ಜೆ.ಶಾಶಂಕ, ಡಾ.ಕುಶವಂತ್, ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬಂದಿಗಳು ಎಂಬಿಬಿಎಸ್, ನರ್ಸಿಂಗ್, ಅರೇ ವೈದ್ಯಕೀಯ ವಿದ್ಯಾರ್ಥಿಗಳು ಹಾಜರಿದ್ದರು.