ಹೊಸನಗರ ತಾಲೂಕಿನ ನಗರದಲ್ಲಿ ಕಸಾಪದಿಂದ ಆಯೋಜಿಸಿದ್ದ ಮನೆಯಂಗಳದಲ್ಲಿ ಸಾಹಿತ್ಯ ಕಾರ್ಯಕ್ರಮದಲ್ಲಿ ವಸುಧಾ ಚೈತನ್ಯ ಮಕ್ಕಳೊಂದಿಗೆ ಸಂವಾದ ನಡೆಸಿದರು.  
ನ್ಯೂಸ್

ಕನ್ನಡ ಭಾಷೆಗಿದೆ ಭವ್ಯ ಇತಿಹಾಸ

ಶಿವಕುಮಾರ ಎಸ್.ಪಿ.

ಹೊಸನಗರ: ಮಕ್ಕಳು ಕನ್ನಡವನ್ನು ಇಷ್ಟಪಡಬೇಕು. ಆಗ ಅನೇಕ ಹೊಸ ಸಾಧ್ಯತೆಗಳು ಕಾಣುತ್ತವೆ ಎಂದು ಉಪನ್ಯಾಸಕಿ ವಸುಧಾ ಚೈತನ್ಯ ಅಭಿಪ್ರಾಯಪಟ್ಟರು.

ತಾಲೂಕಿನ ನಗರದಲ್ಲಿ ಕಸಾಪದಿಂದ ಆಯೋಜಿಸಿದ್ದ ಚಿಣ್ಣರ ಜತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತಿಹಾಸವನ್ನು ಕಥೆಗಳ ಮೂಲಕ ಅರಿತಾಗ ನಮ್ಮ ನೆಲದ ಬಗ್ಗೆ ಹೆಮ್ಮೆಯಾಗುತ್ತದೆ ಎಂದರು.

ಕನ್ನಡ ಒಂದು ಸುಂದರ ಭಾಷೆ. ಶ್ರೀಮಂತಿಕೆ ಜತೆ ಭವ್ಯ ಇತಿಹಾಸವಿದೆ. ಮಕ್ಕಳಿಗೆ ಅದನ್ನು ಪ್ರೇರಣೆ ಆಗುವಂತೆ ತಿಳಿಸಬೇಕು. ಕನ್ನಡವನ್ನು ಅನುದಿನ, ಅನುಕ್ಷಣ ಇಷ್ಟಪಡಬೇಕು. ಆಗ ಕನ್ನಡ ಉಳಿಯುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾಹಿತಿ ಅಂಬ್ರಯ್ಯಮಠ, ನಗರ ಇತಿಹಾಸ ಮತ್ತು ಬೀದನೂರಿನ ರಾಜ ಮನೆತನಗಳು, ಆಡಳಿತ ನಡೆಸಿದ ದೊರೆಗಳ ನೀಡಿದ ಕೊಡುಗೆ ಮಹತ್ವದ್ದಾಗಿದೆ. ಆ ಕಾಲದ ನಗರದಲ್ಲಿ ಒಂದು ಲಕ್ಷ ಮನೆಗಳಿದ್ದ ಸಂಗತಿ ಇಂದು ಬಹಳ ಜನಕ್ಕೆ ತಿಳಿದಿಲ್ಲ. ಹಾಗಾಗಿ ನಗರದಲ್ಲಿ ಚಿಕ್ಕಪೇಟೆ, ದೊಡ್ಡಪೇಟೆ, ದುಬಾರಿಪೇಟೆ, ಗುಜರಿಪೇಟೆ ಎಂಬ ಹೆಸರೇ ಇಲ್ಲಿಯ ಮಹತ್ವ ಸಾರುತ್ತದೆ ಎಂದರು.

ಕಸಾಪ ಹೊಸನಗರ ತಾಲೂಕು ಅಧ್ಯಕ್ಷ ಗಣೇಶಮೂರ್ತಿ ಮಾತನಾಡಿ, ಮಕ್ಕಳು ತಮ್ಮ ಪ್ರತಿಭೆ ಅನಾವರಣಕ್ಕೆ ಅವಕಾಶ ಸಿಕ್ಕಾಗ ಸದ್ಬಳಕೆ ಮಾಡಿಕೊಳ್ಳಬೇಕು. ಇದರಿಂದ ಪರಿಷತ್ ಅವರಿಗೆ ದೊಡ್ಡ ದೊಡ್ಡ ಸಮ್ಮೇಳನಗಳು ಮತ್ತಿತರ ಕಾರ್ಯಕ್ರಮಗಳಲ್ಲಿ ಅವಕಾಶ ಮಾಡಿಕೊಡಲು ಬದ್ಧವಾಗಿರುತ್ತದೆ ಎಂದರು.

ಕಸಾಪ ಕಾರ್ಯದರ್ಶಿ ಕುಬೇಂದ್ರಪ್ಪ, ವಿಕ್ರಮ್ ಉಡುಪ ಭಾವಗೀತೆ ಹಾಡಿದರು. ಕಸಾಪ ನಗರ ಘಟಕದ ಅಧ್ಯಕ್ಷ ನಾರಾಯಣ ಕಾಮತ್, ಕಾರ್ಯದರ್ಶಿ ಶ್ರೀಧರ ಶೆಟ್ಟಿ ಗಣಪತಿ, ಲೀಲಾವತಿ, ಶಿವಶಂಕರ್, ಭಾಗ್ಯಲಕ್ಷ್ಮೀ, ಎಂ.ಎನ್.ಜಗದೀಶ್, ಪ್ರಮೀಳಾ, ಫರೀದಾ, ನೇಮಿರಾಜ್, ಸಂತೋಷ್ ಇತರರಿದ್ದರು.