ಶಿಕಾರಿಪುರದ ಸಿದ್ದಲಿಂಗೇಶ್ವರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕುಮದ್ವತಿ ಬಿ.ಇಡಿ ಕಾಲೇಜಿನ ಉಪನ್ಯಾಸಕ ಡಾ. ರವಿ, ಶಿಕ್ಷಕರಾದ ಬಸವರಾಜ್ ಯಲಿಗಾರ್, ವಿಜಯಕುಮಾರ, ಜ್ಯೋತಿ, ಶಬಾನ ಬೇಗಂ ಇತರರಿದ್ದರು.  
ನ್ಯೂಸ್

ಕನ್ನಡ ನಾಡು ಭೌಗೋಳಿವಾಗಿ ಸಂಪದ್ಭರಿತ

ಶಿವಕುಮಾರ ಎಸ್.ಪಿ.

ಶಿಕಾರಿಪುರ: ಕನ್ನಡ ನಾಡು ಬಹು ವೈಶಿಷ್ಟೃಗಳ ಬೀಡು. ಸಾಂಸ್ಕೃತಿಕ, ಭೌಗೋಳಿಕವಾಗಿ ಅತ್ಯಂತ ಸಂಪದ್ಭರಿತ ನಾಡು ಎಂದು ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಡಾ. ಎಚ್.ರವಿ ಹೇಳಿದರು.

ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಪ್ರೌಢಶಾಲೆಯ ಸಾಹಿತ್ಯ ಸಂಘ ಹಾಗೂ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಭಾಷಾ ಸಂಘಗಳ ಆಶ್ರಯದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ವಿವಿಧ ಸ್ಪರ್ಧಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡದ ಮೊದಲ ಸಾಮ್ರಾಜ್ಯದ ರೂವಾರಿ ಮಯೂರ ಶಿಕಾರಿಪುರ ತಾಲೂಕಿನ ತಾಳಗುಂದದಲ್ಲಿ ಜನಿಸಿದವನು. ಕನ್ನಡದ ಮೊದಲ ಶಾಸನ ತಾಳಗುಂದದ ಸಿಂಹ ಕಟಾಂಜನ ಶಾಸನವೆಂದು ಹೇಳಲಾಗುತ್ತಿದೆ. ಶಿಕಾರಿಪುರ ಕನ್ನಡದ ಹಲವು ಪ್ರಥಮಗಳ ತಾಲೂಕು ಎಂದು ಬಣ್ಣಿಸಿದರು.

ಕನ್ನಡ ಭಾಷೆಯೆಂದರೆ ಹಾಲು-ಜೇನಿನ ಮಿಶ್ರಣ. ಭಾಷೆಗೆ ಸುದೀರ್ಘ ಇತಿಹಾಸ ಮತ್ತು ಸಾಹಿತ್ಯಿಕ ಪರಂಪರೆ ಇದೆ. ನಾಡಿನಾದ್ಯಂತ ರಾಜ್ಯೋತ್ಸವ ಆಚರಣೆ ಮೂಲಕ ಅನೇಕ ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು ಕನ್ನಡ ನಾಡು, ನುಡಿಯ ವೈಭವವನ್ನು ಮಕ್ಕಳು, ಜನಸಾಮಾನ್ಯರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿವೆ ಎಂದರು.

ವಿದ್ಯಾರ್ಥಿಗಳು ಕರ್ನಾಟಕ ರಾಜ್ಯದ ಕುರಿತು ಹೆಚ್ಚಿನ ಅಧ್ಯಯನ ಮಾಡಬೇಕು. ಗತವೈಭವವನ್ನು ಅರ್ಥಮಾಡಿಕೊಳ್ಳಬೇಕು. ಕನ್ನಡ ನಾಡು, ನುಡಿ ಕುರಿತು ಸ್ವರಚಿತ ಕವನ ವಾಚನ, ಪ್ರಬಂಧ ಬರವಣಿಗೆ, ಭಾಷಣ ಸ್ಪರ್ಧೆ ಮತ್ತಿತರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಮುಖ್ಯ ಶಿಕ್ಷಕ ಬಸವರಾಜ ಯಲೆಗಾರ್ ಮಾತನಾಡಿ, ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ನೆಲ, ಜಲ, ಜನ, ಸಂಸ್ಕೃತಿ ಸಾಕಷ್ಟು ವೈವಿಧ್ಯವಾಗಿದೆ. ಕನ್ನಡ ನಾಡಿನಲ್ಲಿ ಅನೇಕ ಕವಿಗಳು, ಸಾಹಿತಿಗಳು, ಲೇಖಕರು ಕಾಲದಿಂದ ಕಾಲಕ್ಕೆ ನೀಡಿದ ಸಾಹಿತ್ಯಿಕ ಕೊಡುಗೆ ಅಪಾರ. ಅವರ ಸಾಧನೆಯನ್ನು ಈಗಿನ ಪೀಳಿಗೆ ಅರಿತುಕೊಳ್ಳಬೇಕು ಎಂದು ತಿಳಿಸಿದರು.

ಕನ್ನಡ ನಾಡು-ನುಡಿಯ ಇತಿಹಾಸ ಕುರಿತು ಪ್ರಬಂಧ ಮತ್ತು ಭಾಷಣ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕರಾದ ವಿಜಯಕುಮಾರ, ರಾಜಶೇಖರ, ಜ್ಯೋತಿ, ಶಬಾನ ಬೇಗಂ, ರವಿಕುಮಾರ, ರವಿಶಂಕರ ಇದ್ದರು