ಮೈಸೂರು: ಕನ್ನಡಿಗರು ಒಟ್ಟಾಗಿ ಹೋರಾಟ ಮಾಡುವ ಮೂಲಕ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು.
ನಗರದ ಕಿರು ರಂಗಮಂದಿರದಲ್ಲಿ ಭಾನುವಾರ ಸಾಹಿತ್ಯ ಲೋಕ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಲೇಖಕ ಎಡೆಯೂರು ಸಮೀಉಲ್ಲಾ ವಿರಚಿತ ‘ನೆನಪಿನ ಚಿತ್ತಾರಗಳು’ ಮತ್ತು ‘ನೆನಪಿನ ಮಳೆಬಿಲ್ಲು ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಲ್ಲ ಧರ್ಮ, ಸಮುದಾಯ, ಜಾತಿಗಳು ಕನ್ನಡವನ್ನು ಗಟ್ಟಿಯಾಗಿ ಹಿಡಿದುಕೊಳ್ಳಬೇಕು. ಇದರಿಂದ ಯಾರಾದರೂ ನಮ್ಮ ಸುದ್ದಿಗೆ ಬಂದರೆ ಅವರನ್ನು ವಿಚಾರಿಸಿಕೊಳ್ಳಲು ಕನ್ನಡವೆಂಬ ಹಕ್ಕಿದೆ ಎಂಬುದನ್ನು ತೋರಿಸಬೇಕು ಎಂದರು.
ರಾಜ್ಯ ಆಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಂಗಪ್ರವೇಶವೇ ಕನ್ನಡ ಕಾವಲು ಸಮಿತಿಯಿಂದ ಆಗಿದೆ. ಈಗಂತೂ ಅವರು ಕನ್ನಡಕ್ಕೆ ಬದ್ಧರಾಗಿದ್ದಾರೆ. ಎಲ್ಲ ರಕ್ಷಣೆಗೆ ಸಿದ್ಧರಾಗಿದ್ದಾರೆ. ಅವರ ಕೈ ಗಟ್ಟಿ ಮಾಡುವುದು ನಮ್ಮ ಕರ್ತವ್ಯ. ನಾಡಿಗೆ ಸಾಂಸ್ಕೃತಿಕ ರಾಯಭಾರಿಯನ್ನಾಗಿ ಬಸವಣ್ಣನವರನ್ನು ಘೋಷಿಸಿಕೊಟ್ಟಿದ್ದಾರೆ. ಇನ್ನು ಐದು ವರ್ಷ ಈ ಕನ್ನಡದ ಸುದ್ದಿಗೆ ಯಾರೂ ಬರುವುದಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಹಕ್ಕು ಚಲಾಯಿಸಲು ಇರುವ ಏಕೈಕ ಆಯುಧ ಕನ್ನಡ. ಈ ಆಯುಧವನ್ನು ಗಟ್ಟಿಗೊಳಿಸುವ ಕೆಲಸವಾಗಬೇಕು. ಹೀಗಾಗಿ ಕನ್ನಡದ ಸಂಘಟನೆಯಲ್ಲಿ ಭೀಮಾ ಪರಿವಾರ ಹೆಚ್ಚು ತೊಡಗಿಕೊಳ್ಳಬೇಕು. ಕನ್ನಡ ಎಂಬುದು ಕರ್ನಾಟಕ ಪ್ರಾದೇಶಿಕ ನಕಾಶೆಯ ಬೆನ್ನು ಹುರಿ ಹಾಗೂ ಮೆದುಳು ಬಳ್ಳಿ. ಈ ರಾಜ್ಯದ ಒಕ್ಕೂಟದ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಪ್ರಯತ್ನಿಸಿದರೆ, ತೊಂದರೆಯಾಗುವುದು ಬೆನ್ನು ಹುರಿ, ಮೆದುಳು ಬಳ್ಳಿಗೆ. ರಾಜ್ಯದ ಸಂಪತ್ತನ್ನು ನಾವು ಹಕ್ಕಾಗಿ ಪಡೆದುಕೊಂಡಿದ್ದೇವೆ. ಇದಕ್ಕಾದರೂ ಕನ್ನಡ ಗಟ್ಟಿಗೊಳಿಸುವ ಕೆಲಸ ಮಾಡಬೇಕು. ಕನ್ನಡದ ಸಂಘಟನೆಯಲ್ಲಿ ಭೀಮಾ ಪರಿವಾರ ಹೆಚ್ಚು ತೊಡಗಿಕೊಳ್ಳಬೇಕು ಎಂದು ತಿಳಿಸಿದರು.
ಸಂಸ್ಕೃತಿ ಚಿಂತಕ ಗುಬ್ಬಿಗೂಡು ರಮೇಶ್ ಮಾತನಾಡಿ, ಕವಿ, ಸಾಹಿತಿಗಳು ಬರವಣೆಗೆಯ ಮೂಲಕ ಕನ್ನಡ ಹೋರಾಟವನ್ನು ಶ್ರೀಮಂತಗೊಳಿಸಿದ್ದಾರೆ. ಚಳವಳಿಗಳ ಮೂಲಕ ಹೋರಾಟಗಾರರು ಕನ್ನಡವನ್ನು ಮೆರವಣಿಗೆ ಮಾಡಿದ್ದಾರೆ. ಇವೆರಡೂ ಒಗ್ಗೂಡಿ ಕನ್ನಡದ ಬೆಳವಣಿಗೆಯಾಗಬೇಕು ಎಂದರು.
ಗಾಯಕ ರಾಜೇಶ್ ಪಡಿಯಾರ್ ಮತ್ತು ತಂಡದಿಂದ ಭಾವಗೀತೆಗಳ ಗಾನಯಾನ ನಡೆಯಿತು. ಹಂಸಲೇಖ ರಾಗ ಸಂಯೋಜನೆ ಮಾಡಿರುವ ಸಂವಿಧಾನ ಪೀಠಿಕೆ ಗೀತೆಯನ್ನು ದರ್ಶನ್ ಹಾಡಿದರು. ಸಾಹಿತ್ಯಲೋಕ ಸಂಸ್ಥೆಯ ಅಧ್ಯಕ್ಷ ವೈ.ಡಿ.ರಾಜಣ್ಣ, ಶೇಖರ್, ಇಂದ್ರಾಣಿ, ಅಶ್ವಿನಿ, ಎ.ಜಿ.ದೇವರಾಜು, ಲತಾ ಹಂಸಲೇಖ, ವೇದ ಡಿ.ರಜೋಲಿ ಹಾಜರಿದ್ದರು.