ನ್ಯೂಸ್

ಅಮ್ಮನ ಅಗಲಿಕೆಯಿಂದ ಒಬ್ಬಂಟಿಯಾದ ವಿನೋದ್​ ರಾಜ್​… ಶನಿವಾರ ನೆಲಮಂಗಲದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ

ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕನ್ನಡದ ಹಿರಿಯ ನಟಿ ಲೀಲಾವತಿ ಶುಕ್ರವಾರ ಸಂಜೆ ಕೊನೆಯುಸಿರೆಳೆದಿದ್ದು, ಸುದ್ದಿ ತಿಳಿಯುತ್ತಿದ್ದಂತೆ ನೆಲಮಂಗಲದ ಸೋಲದೇವನಹಳ್ಳಿಯ ಅವರ ತೋಟದ ಮನೆಗೆ ಜನಸಾಗರ ಹರಿದು ಬರತೊಡಗಿತು.

ಆದರೆ ತಮ್ಮ ನೆಚ್ಚಿನ 'ಅಮ್ಮ' ನಟಿ ನೋಡಲು ಕತ್ತಲಲ್ಲಿ ಜನ ಬರುತ್ತಿರುವುದನ್ನು ಗಮನಿಸಿ ಅವರ ಪುತ್ರ ವಿನೋದ್​ ರಾಜ್​ ಮತ್ತು ಕುಟುಂಬಸ್ಥರು, ಹಿತೈಷಿಗಳು ಅಂತಿಮ ದರ್ಶನಕ್ಕೆ ನೆಲಮಂಗಲ ಜೂನಿಯರ್​ ಕಾಲೇಜು ಮೈದಾನದಲ್ಲಿ ವ್ಯವಸ್ಥೆ ಮಾಡುವುದಾಗಿ ಪ್ರಕಟಿಸಿದರು. ಶನಿವಾರ ಮಧ್ಯಾಹ್ನದ ವರೆಗೆ ಸಾರ್ವಜನಿಕರು ಅಂತಿಮ ದರ್ಶನ ಮಾಡಬಹುದಾಗಿದೆ. ಚಿತ್ರರಂಗದ ಗಣ್ಯರು, ಜನಪ್ರತಿನಿಧಿಗಳು ಸೇರಿದಂತೆ ನೂರಾರು ಮಂದಿ ಶುಕ್ರವಾರ ಸಂಜೆ ಅಂತಿಮ ದರ್ಶನ ಪಡೆದುಕೊಂಡರು.

ಅಮ್ಮನ ಬಿಟ್ಟಿರದ ಪುತ್ರ: ಸದಾ ತನ್ನ ತಾಯಿ ಜತೆ ಇರುತ್ತಿದ್ದ ನಟ ವಿನೋದ್​ ರಾಜ್​ ಅಮ್ಮ ಇನ್ನಿಲ್ಲ ಎಂಬುದು ಅರಿವಾಗುತ್ತಿದ್ದಂತೆ ಮಗುವಿನಂತೆ ಬಿಕ್ಕಿ ಬಿಕ್ಕಿ ಅಳುತ್ತಿದ್ದುದು ಕಲ್ಲುಹೃದಯದವರ ಮನಸ್ಸನ್ನೂ ಕರಗಿಸುವಂತಿತ್ತು.

ನೋವು ನುಂಗಿಕೊಂಡಿದ್ದ ಅಮ್ಮ-ಮಗ: ಅಮ್ಮನ ಸೇವೆಗಿಂತ ಬೇರೆ ಇನ್ನೊಂದಿಲ್ಲ ಎಂದು ನಂಬಿ ಅಮ್ಮನ ಸೆರಗು ಹಿಡಿದೇ ಬೆಳೆಯುವ ಮಗುವಿನಂತೆ 50ರ ಆಸುಪಾಸಿನಲ್ಲಿರುವ ವಿನೋದ್​ ರಾಜ್​ ಬದುಕು ಸಾಗಿಸುತ್ತಿದ್ದರು. ಮನಸ್ಸಲ್ಲಿ ಎಷ್ಟೇ ನೋವಿದ್ದರೂ ಅಮ್ಮ-ಮಗ ಇಬ್ಬರೇ ಹಂಚಿಕೊಂಡಿದ್ದು ಹೆಚ್ಚು. ಅಗಲಿರದ ಈ ತಾಯಿ ಮತ್ತು ಮಗನ ಬಂಧಕ್ಕೆ ವಿಧಿ ಈಗ ತಾಯಿ ಅಗಲಿಕೆ ಮೂಲಕ ಪೆಟ್ಟುಕೊಟ್ಟಿದೆ.

ಆದರೆ ಅಮ್ಮ ಇನ್ನೂ ನನ್ನಿಂದ ದೂರವಾಗಿಲ್ಲ ಎಂಬ ಮನೋಭಾವದಲ್ಲಿರುವ ವಿನೋದ್​ ರಾಜ್​ 'ಅಮ್ಮನ ಬಿಟ್ಟು ಹೇಗಿರಲಿ?' ಎಂಬ ಮಾತುಗಳು ಮನ ಕಲಕುವಂತಿದ್ದವು.ಒಟ್ಟಿನಲ್ಲಿ ವಿನೋದ್​ ರಾಜ್​ ಅವರಲ್ಲಿ ತಬ್ಬಲಿಯಾದಂತಹ ಮನೋಭಾವ ಮೂಡಿದ್ದುದು ಕಂಡು ಬಂದಿತು.

ಚೆನ್ನೈನಲ್ಲಿ ವಿನೋದ್​ ಜನನ: ಲೀಲಾವತಿ ಅವರು 1967ರಲ್ಲಿ ಜುಲೈ 7ರಂದು ಚೆನ್ನೈನಲ್ಲಿ ಮಗ ವಿನೋದ್ ರಾಜ್ ಅವರಿಗೆ ಜನ್ಮ ನೀಡಿದರು. ಈ ಮೂಲಕ ಕನ್ನಡ ಚಿತ್ರರಂಗದ ಪ್ರಸಿದ್ಧ ನಟಿ ತಾಯಿಯಾದರು. ಅಂದಿನಿಂದ ಈ ಅಮ್ಮ-ಮಗ ಒಟ್ಟಿಗೇ ಇದ್ದಾರೆ.

ಎಲ್ಲಿ ಹೋದರೂ, ಬಂದರೂ ಅಮ್ಮ - ಮಗನ ಜೊತೆಗೇ ಇರುತ್ತಿದ್ದರು. ಅದು ಚಿತ್ರರಂಗದ ಕಾರ್ಯಕ್ರಮವಿರಲಿ, ಮದುವೆ-ಗೃಹಪ್ರವೇಶವಿರಲಿ ಅಥವಾ ಯಾವುದಾದರೂ ದೇವಾಲಯಕ್ಕೆ ಹೋದರೂ ಅಮ್ಮನ ಜೊತೆ ವಿನೋದ್ ಇದ್ದೇ ಇರುತ್ತಿದ್ದರು. ಅಮ್ಮ-ಮಗ ಇಬ್ಬರೂ ಕೃಷಿಯಲ್ಲಿ ಖುಷಿ ಕಂಡಿದ್ದರು. ನಗರ ಜೀವನದಿಂದ ದೂರವಿದ್ದ ಈ ಅಮ್ಮ ಮಗನ ಜೋಡಿ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಸರಳ ಜೀವನ ನಡೆಸಿದರು. ಲೀಲಾವತಿ ಅವರು ಮಗನನ್ನು ತುಂಬ ಹಚ್ಚಿಕೊಂಡಿದ್ದರು. ಈ ಅಮ್ಮ ಮಗನ ಜೋಡಿ ಸ್ಯಾಂಡಲ್​ವುಡ್ ಮಂದಿ ಮರೆಯಲು ಸಾಧ್ಯವಿಲ್ಲ.