Tiger Shroff - Sachin Ravi
Tiger Shroff - Sachin Ravi :
ಬಾಲಿವುಡ್ನಲ್ಲಿ ಆ್ಯಕ್ಷನ್ ಸ್ಟಾರ್ ಆಗಿ ಹೆಸರು ಮಾಡಿರುವ ಟೈಗರ್ ಶ್ರಾಫ್ ಮತ್ತು ಕನ್ನಡದ "ಉಳಿದವರು ಕಂಡಂತೆ', "ಕಿರಿಕ್ ಪಾರ್ಟಿ' ಸಂಕಲನಕಾರ, "ಅವನೇ ಶ್ರೀಮನ್ನಾರಾಯಣ' ನಿರ್ದೇಶಕ ಸಚಿನ್ ಬಿ. ರವಿ ಕಾಂಬಿನೇಷನ್ನಲ್ಲಿ ಹೊಸ ಸಿನಿಮಾ ಮೂಡಿಬರುತ್ತಿರುವುದು ಗೊತ್ತಿತ್ತು. ಇದೀಗ ಆ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್ - ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿವೆ. ಈ ಬಗ್ಗೆ ವಿಜಯವಾಣಿ ಜತೆ ಮಾಹಿತಿ ಹಂಚಿಕೊಂಡ ನಿರ್ದೇಶಕ ಸಚಿನ್ ರವಿ, "ಟೈಗರ್ ಶ್ರಾಫ್ ಒಳ್ಳೆ ಡಾನ್ಸರ್ ಮತ್ತು ಫೈಟರ್ ಎಂಬುದು ಎಲ್ಲರಿಗೂ ಗೊತ್ತು. ಅವರ ಸಿಕ್ಸ್ ಪ್ಯಾಕ್ ಬಾಡಿ, ಡಾನ್ಸ್ ಮತ್ತು ಸ್ಟಂಟ್ಗಳನ್ನು ಎಲ್ಲ ಸಿನಿಮಾಗಳಲ್ಲೂ ನೋಡಿರುತ್ತಾರೆ. ಆದರೆ, ನಮ್ಮ ಚಿತ್ರದಲ್ಲಿ ಹಾಡುಗಳೇ ಇರುವುದಿಲ್ಲ. ಕೆಲ ಫೈಟ್ಗಳಿದ್ದರೂ, ಅವು ಕಥೆಗೆ ಪೂರಕವಾಗಿ ಇರಲಿವೆ. ಸಿನಿಮಾದ ಶೇಕಡಾ 80ರಿಂದ 9ರಷ್ಟು ಭಾಗದಲ್ಲಿ ಟೈಗರ್ ಇರುತ್ತಾರೆ. ಭಾವನಾತ್ಮಕ ಅಂಶಗಳಿರುವ ಆ್ಯಕ್ಷನ್ ಥ್ರಿಲ್ಲರ್ ಕಥೆಯಿದು. ಈ ಚಿತ್ರದಲ್ಲಿ ಹೊಸ ಟೈಗರ್ ನೋಡಬಹುದು. ನಟನೆಗೆ ತುಂಬ ಸ್ಕೋಪ್ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಸದ್ಯ ಚಿತ್ರೀಕರಣೋತ್ತರ ಕೆಲಸಗಳು ನಡೆಯುತ್ತಿವೆ. ಕೆಲವೇ ದಿನಗಳಲ್ಲಿ ಚಿತ್ರದ ಟೈಟಲ್ ರಿವೀಲ್ ಮಾಡಲಿದ್ದೇವೆ. ಈ ವರ್ಷ "ರಾಮಾಯಣ', "ಕಿಂಗ್' ಸೇರಿ ಹಿಂದಿಯಲ್ಲಿ ಕೆಲ ದೊಡ್ಡ ಸಿನಿಮಾಗಳು ಬಿಡುಗಡೆಗೆ ಲೈನಪ್ನಲ್ಲಿವೆ. ಹೀಗಾಗಿ 2027ರ ಹೊಸ ವರ್ಷಕ್ಕೆ ನಮ್ಮ ಸಿನಿಮಾ ರಿಲೀಸ್ ಮಾಡಲಿದ್ದೇವೆ' ಎಂದು ಹೇಳಿಕೊಳ್ಳುತ್ತಾರೆ. ಅಂದಹಾಗೆ, ಚಿತ್ರಕ್ಕೆ "ಹಿಟ್ಮ್ಯಾನ್' ಎಂಬ ಶೀರ್ಷಿಕೆ ಇಡಲಾಗಿದ್ದು, ಇನ್ನಷ್ಟೇ ಚಿತ್ರತಂಡ ಅದನ್ನು ಬಹಿರಂಗಗೊಳಿಸಬೇಕಿದೆ. ಹಾಗೇ ಟೈಗರ್ ಶ್ರಾಫ್ ಜತೆ ಸುನೀಲ್ ಶೆಟ್ಟಿ, ಅಮಿತ್ ಸದ್, ಸಂಜನಾ ಸಂಗಿ, ಮಹಿಮಾ ಮಕ್ವಾನಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ದಕ್ಷಿಣದ ನಿರ್ದೇಶಕರೇ ಏಕೆ?
ಕಳೆದ ವರ್ಷ ರಿಲೀಸ್ ಆಗಿದ್ದ ಟೈಗರ್ ಶ್ರಾಫ್ ನಟನೆಯ "ಬಾಘೀ 4'ಗೆ "ಭಜರಂಗಿ' ಖ್ಯಾತಿಯ ಎ. ಹರ್ಷ ಆ್ಯಕ್ಷನ್-ಕಟ್ ಹೇಳಿದ್ದರು. ಅದರ ಬೆನ್ನಲ್ಲೇ ಮತ್ತೊಬ್ಬ ಕನ್ನಡಿಗ ಸಚಿನ್ ಬಿ. ರವಿಗೆ ಟೈಗರ್ ಡೇಟ್ಸ್ ನೀಡಿದ್ದರು. ಇತ್ತೀಚಿನ ದಿನಗಳಲ್ಲಿ ದಕ್ಷಿಣದ ನಿರ್ದೇಶಕರಿಗೆ ಬಾಲಿವುಡ್ ಮಣೆ ಹಾಕುತ್ತಿರುವ ಬಗ್ಗೆ, "ಬಾಲಿವುಡ್ ನಿರ್ದೇಶಕರು ಸಾಮಾನ್ಯವಾಗಿ ನಗರದ ಕಥೆಗಳತ್ತ ಹೆಚ್ಚಾಗಿ ಗಮನ ಹರಿಸುತ್ತಾರೆ. ಹೀಗಾಗಿ ಎಲ್ಲ ಕಥೆಗಳೂ ನಗರ ಕೇಂದ್ರವಾಗಿರುತ್ತವೆ. ಅದು ಕೆಲವೊಮ್ಮೆ ಒಂದೇ ರೀತಿ ಅಂತನ್ನಿಸಬಹುದು. ಆದರೆ, ದಣ ಭಾರತದ ನಿರ್ದೇಶಕರು ಹಾಗಲ್ಲ. ನೆಲ ಮೂಲದ ಕಥೆಗಳಿಗೆ ಹೆಚ್ಚು ಪ್ರಾಮುಖ್ಯ ನೀಡುತ್ತಾರೆ. ಅದಕ್ಕೆ ಇತ್ತೀಚೆಗೆ ಬರುತ್ತಿರುವ ಕಥೆಗಳೇ ಉತ್ತಮ ಉದಾಹರಣೆ. ಜತೆಗೆ ಒಂದೊಂದು ಗ್ರಾಮೀಣ ಭಾಗದಲ್ಲೂ ಹಲವು ರೀತಿಯ ಆಚಾರ&ವಿಚಾರ, ಆಚರಣೆ, ಸಂಸತಿಗಳಿರುತ್ತವೆ. ಹೀಗಾಗಿಯೇ ಬಾಲಿವುಡ್ ನಿರ್ಮಾಣ ಸಂಸ್ಥೆಗಳಲ್ಲಿ ಇತ್ತೀಚೆಗೆ ದಣದ ನಿರ್ದೇಶಕರಿಗೂ ಅವಕಾಶ ನೀಡುತ್ತಿವೆ' ಎನ್ನುತ್ತಾರೆ.
ಇನ್ನೊಂದು ಹಿಂದಿ, ಆಮೇಲೆ ಕನ್ನಡ?
ಟೈಗರ್ ಶ್ರಾಫ್ ಜತೆಗಿನ ಸಿನಿಮಾ ಮುಗಿದ ಬೆನ್ನಲ್ಲೇ ಸಚಿನ್ ಮತ್ತೊಬ್ಬ ಬಾಲಿವುಡ್ ಸ್ಟಾರ್ ಜತೆಗೆ ಇನ್ನೊಂದು ಹೊಸ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ. ಆ ಬಳಿಕ ಅವರು ಮತ್ತೆ ಕನ್ನಡಕ್ಕೆ ಮರಳುವ ನಿರೀಕ್ಷೆಯಿದೆ.