ಬೆಂಗಳೂರು: ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ವಿಶ್ವವಿದ್ಯಾಲಯಕ್ಕೆ ಸೇರಿದ 10 ಎಕರೆ ಜಾಗದಲ್ಲಿ ಸುಸಜ್ಜಿತವಾದ ಕನ್ನಡ ಶಾಸ್ತ್ರೀಯ ಅಧ್ಯಯನ ಕೇಂದ್ರ ತಲೆ ಎತ್ತಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಅಧ್ಯಕ್ಷತೆಯಲ್ಲಿ ನಡೆದ ಪ್ರಮುಖರ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಕನ್ನಡ ಭಾಷೆ, ಸಂಸ್ಕೃತಿ, ಇತಿಹಾಸದ ಬೆಳವಣಿಗೆಗೆ ಪ್ರೋತ್ಸಾಹ ನೀಡಲು ಉದ್ದೇಶಿತ ಅಧ್ಯಯನ ಕೇಂದ್ರ ಪ್ರಾರಂಭಿಸಲು 1 ತಿಂಗಳೊಳಗೆ ಅಗತ್ಯ ಸಿದ್ಧತೆ ಪ್ರಾರಂಭಿಸಿ, ಜಾಗ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸಲಾಗಿದೆ.
ಕನ್ನಡ ಭಾಷೆಗೆ ಕೇಂದ್ರ ಸರ್ಕಾರ ಶಾಸ್ತ್ರೀಯ ಸ್ಥಾನಮಾನ ನೀಡಿ ಹಲವು ವರ್ಷಗಳು ಕಳೆದರೂ ಶಾಶ್ವತ ಅಧ್ಯಯನ ಕೇಂದ್ರ ಆರಂಭ ಮಾಡದಿರುವುದು ನೋವಿನ ಸಂಗತಿ ಎಂದು ಸಚಿವರು ವಿಷಾದಿಸಿದರು. ಇಲ್ಲಸಲ್ಲದ ಕಾರಣಗಳನ್ನು ಮುಂದಿಟ್ಟು ವಿಳಂಬ ನೀತಿ ಅನುಸರಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದ ಸಚಿವರು, ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ. ಎಷ್ಟು ಸಾಧ್ಯವೋ ಅಷ್ಟು ಬೇಗ ಪ್ರಾರಂಭಿಸುವುದಕ್ಕೆ ಕಾರ್ಯೋನ್ಮುಖರಾಗಬೇಕು ಎಂದು ತಾಕೀತು ಮಾಡಿದರು. ಈ ಕೇಂದ್ರದಲ್ಲಿ ಆಧುನಿಕ ತಂತ್ರಜ್ಞಾನ ಒಳಗೊಂಡಂತೆ ಎಲ್ಲ ರೀತಿಯ ಸೌಲಭ್ಯಗಳು ಲಭ್ಯವಿರಬೇಕು. ಹಣಕಾಸಿನ ತೊಂದರೆ ಇಲ್ಲವೆಂದು ಸಚಿವರು ಸ್ಪಷ್ಟಪಡಿಸಿದರು.
ಕೇಂದ್ರ ಸಚಿವರ ಬಳಿಗೆ ನಿಯೋಗ: ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು ಹಾಗೂ ರಾಜ್ಯವನ್ನು ಪ್ರತಿನಿಧಿಸುವ ಸಚಿವ ಡಿ.ವಿ.ಸದಾನಂದಗೌಡ, ಪ್ರಲ್ಹಾದ ಜೋಶಿ ಬಳಿಗೆ ನಿಯೋಗ ತೆರಳಿ, ಕೇಂದ್ರಕ್ಕೆ ಅಗತ್ಯವಿರುವ ಅನುದಾನ, ಮತ್ತಿತರ ಸವಲತ್ತುಗಳನ್ನು ಮಂಜೂರು ಮಾಡಲು ಕೋರುವುದು. ಅಲ್ಲದೆ, ಕನ್ನಡ ಶಾಸ್ತ್ರೀಯ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ನೀಡುವಂತೆ ಪ್ರಸ್ತಾವನೆ ಸಲ್ಲಿಸಲು ನಿರ್ಣಯಿಸಲಾಗಿದೆ. ಈಗಾಗಲೇ ಕೇಂದ್ರ ಸರ್ಕಾರ ಅನುದಾನ ನೀಡುತ್ತಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು ಸಮಿತಿಯ ಅಧ್ಯಕ್ಷರಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಸಚಿವರು ಉಪಾಧ್ಯಕ್ಷರಾಗಿ ಇತರರನ್ನು ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಗುತ್ತದೆ ಎಂದು ಸಿಐಐಎಲ್ ಅಧಿಕಾರಿಗಳು ಸಚಿವರಿಗೆ ವಿವರಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ, ಟಿ.ವಿ.ವೆಂಕಟಾಚಲಶಾಸ್ತ್ರಿ, ಪೊ›.ತಳವಾರ್, ಡಾ. ದುರ್ಗಾದಾಸ್, ಪೊ›.ಎನ್.ಎಸ್.ತಾರಾನಾಥ್, ಸಿಐಐಎಲ್ ನಿರ್ದೇಶಕ ಡಾ.ರಾವ್, ಪಿಎಂಬಿ ಸದಸ್ಯರು, ಅಧಿಕಾರಿಗಳು ಇದ್ದರು.
ವಿಳಂಬ ಆಗುವುದಕ್ಕೆ ಕಾರಣ
ಕನ್ನಡ ಶಾಸ್ತ್ರೀಯ ಅಧ್ಯಯನ ಕೇಂದ್ರವು ಸಿಐಐಎಲ್ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಮೈಸೂರು ವಿವಿಗೆ ಸೇರಿದ 3 ಎಕರೆ ಜಾಗದಲ್ಲಿ ಈ ಕೇಂದ್ರ ಪ್ರಾರಂಭಿಸಲು ನಿರ್ಧರಿಸಲಾಗಿತ್ತು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಲೋಕ ಶಿಕ್ಷಣ ಇಲಾಖೆಗೆ ನೀಡಿದ ಜಾಗ ರದ್ದುಪಡಿಸಿ ಉನ್ನತ ಶಿಕ್ಷಣ ಇಲಾಖೆಗೆ ಹಿಂದಿರುಗಿಸಿದ್ದು, ಪ್ರಸ್ತುತ ಜಾಗವನ್ನು ಕೌಶಲಾಭಿವೃದ್ಧಿ ಇಲಾಖೆಗೆ ನೀಡುವಂತೆ ವಿವಿಗೆ ಪತ್ರ ಬರೆದಿರುವ ಕಾರಣ ವಿಳಂಬವಾಗಿದೆ. ವಿವಿಗೆ ಸೇರಿದ ಹೊರ ವಲಯದಲ್ಲಿ ಕೇಂದ್ರಕ್ಕೆ ಜಾಗ ನೀಡಬೇಕೆಂಬ ಸಚಿವ ಸಿ.ಟಿ.ರವಿ ಕೋರಿಕೆಗೆ ಉನ್ನತ ಶಿಕ್ಷಣ ಇಲಾಖೆ ಹೊಂದಿರುವ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ವಿವಿಯು ಈ ಜಾಗವನ್ನು ಅಧಿಕೃತವಾಗಿ ಹಸ್ತಾಂತರಿಸಿದ ಬಳಿಕ ಕೇಂದ್ರದ ಕಟ್ಟಡ ನಿರ್ವಣಕ್ಕೆ ಶೀಘ್ರ ಅನುದಾನ ಬಿಡುಗಡೆ ಮಾಡುವಂತೆ ಕೋರಲಿದ್ದು, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರನ್ನು ನಿಯೋಗ ಭೇಟಿಯಾದಾಗ ಈ ಕುರಿತು ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.