ಕೈಲಾಂಚ: ಕನ್ನಡ ಭಾಷೆ ನಿಂತ ನೀರಲ್ಲ, ಕಾಲಕಾಲಕ್ಕೆ ಹೊಸತನ, ಹೊಸ ಹುರುಪನ್ನು ತರುತ್ತದೆ ಇದೊಂದು ಸುಂದರ ಭಾಷೆಯಾಗಿದೆ ಎಂದು ಬನ್ನಿಕುಪ್ಪೆ ಗ್ರಾಪಂ ಉಪಾಧ್ಯಕ್ಷ ಚಂದ್ರಗಿರಿ ಬಣ್ಣಿಸಿದರು.ಕೈಲಾಂಚ ಹೋಬಳಿಯ ಬನ್ನಿಕುಪ್ಪೆ ಗ್ರಾಮದ ಜೋಡಿ ಬಸವೇಶ್ವರ ಗೆಳೆಯರ ಬಳಗದ ವತಿಯಿಂದ ಬಸ್ ನಿಲ್ದಾಣದ ಸರ್ಕಲ್‌ನಲ್ಲಿ ಶನಿವಾರ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕನ್ನಡಿಗರ ನಿರ್ಲಕ್ಷ್ಯ ಮತ್ತು ತಾತ್ಸಾರ ಮನೋಭಾವದಿಂದಾಗಿ ಇಂದು ಕನ್ನಡಕ್ಕೆ ಅಪಾಯ ಕಾದಿದೆ. ಈ ನಿಟ್ಟಿನಲ್ಲಿ ಇಂದಿನ ಯುವ ಪೀಳಿಗೆ ಕನ್ನಡ ಭಾಷೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ. ಕನ್ನಡವನ್ನು ಬದುಕಿನ ಭಾಷೆಯಾಗಿ ಪರಿಗಣಿಸಬೇಕು. ಇತರ ಭಾಷೆಗಳ ಜತೆ ಕನ್ನಡಕ್ಕೆ ಅಗ್ರಸ್ಥಾನ ಕೊಟ್ಟು ಬೆಳೆಸಬೇಕಿದೆ. ಹಾಗೆಯೇ ಭಾಷೆಯ ಬೆಳವಣಿಗೆಗೆ ಸಹಕರಿಸಿರುವ ಮಹನೀಯರ ಜೀವನ ಚರಿತ್ರೆಯನ್ನು ತಿಳಿದುಕೊಂಡು ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಮನ್ನಡೆಯಬೇಕಾಗಿದೆ ಎಂದು ತಿಳಿಸಿದರು.
ಬನ್ನಿಕುಪ್ಪೆ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ರೇಣುಕಯ್ಯ ಮಾತನಾಡಿ, ಕರ್ನಾಟಕಕ್ಕೆ ತನ್ನದೇ ಆದ ಸಂಸ್ಕೃತಿ, ಪರಂಪರೆ ಇದೆ. ಕನ್ನಡ ರಾಜ್ಯೋತ್ಸವ ಆಚರಣೆ ಪುಣ್ಯದ ಕೆಲಸ. ಕನ್ನಡ ನಾಡು, ನುಡಿ, ಜಲದ ಬಗ್ಗೆ ಅರಿತುಕೊಂಡಾಗ ಮಾತ್ರ ರಾಜ್ಯೋತ್ಸವ ಆಚರಣೆಗೆ ನಿಜವಾದ ಅರ್ಥ ಬರುತ್ತದೆ ಎಂದರು.
ಬನ್ನಿಕುಪ್ಪೆ ಬೆಸ್ಕಾಂ ವಿಭಾಗದಲ್ಲಿ ಜೂನಿಯರ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾದ ಚನ್ನಮಾನಹಳ್ಳಿ ದೊಡ್ಡರಾಮಯ್ಯ ಬಳಗದ ವತಿಯಿಂದ ಸನ್ಮಾನಿಸಲಾಯಿತು.
ಗ್ರಾಪಂ ಸದಸ್ಯರಾದ ಬಿ.ಸಿ ಹೇಮಂತ್‌ಕುವಾರ್, ಶೋಭಾ, ಬೆಸ್ಕಾಂ ಜೆಇ ಕೃಷ್ಣಪ್ರಸಾದ್, ಗೆಳೆಯರ ಬಳಗದ ಸದಸ್ಯರಾದ ಬಾಬು, ಪ್ರಮೋದ್, ಪಾರ್ಥಸಾರಥಿ, ಮಧುಸೂಧನ, ಸುಂದರೇಶ, ಗಿರೀಶ್, ರಾಕೇಶ್, ನಾಗೇಶ ಮತ್ತಿತರರು ಇದ್ದರು.