ನ್ಯೂಸ್

ಕಿದ್ವಾಯಿ ಅಕೌಂಟೆಂಟ್ ಖಾತೆಗೆ ಕನ್ನ

ಬೆಂಗಳೂರು: ಸರ್ಕಾರಿ ಆಸ್ಪತ್ರೆ ಮಹಿಳಾ ಸಿಬ್ಬಂದಿಗೆ ಕೆನರಾ ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿ ಖಾತೆ ಅಪ್‌ಡೇಟ್ ಮಾಡಬೇಕೆಂದು ಹೇಳಿ 53 ಸಾವಿರ ರೂ. ಕನ್ನ ಹಾಕಿದ್ದಾರೆ.

ಕಿದ್ವಾಯಿ ಆಸ್ಪತ್ರೆ ಅಕೌಂಟೆಂಟ್ ಕೋಮತಿ ವಿಜಯ್ ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅ. 8ರ ಮಧ್ಯಾಹ್ನ 3 ಗಂಟೆಯಲ್ಲಿ ಕೋಮತಿ ಮೊಬೈಲ್‌ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ಕೆನರಾ ಬ್ಯಾಂಕ್‌ನಿಂದ ಮಾತನಾಡುತ್ತಿರುವುದಾಗಿ ಪರಿಚಯ ಮಾಡಿಕೊಂಡಿದ್ದ. ಇದಾದ ಮೇಲೆ, ‘ನಿಮ್ಮ ಖಾತೆಯನ್ನು ಅಪ್‌ಡೇಟ್ ಮಾಡಬೇಕಿದೆ. ಇಲ್ಲವಾದರೆ, ಲಾಕ್ ಆಗಿ ಯಾವುದೇ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ’ ಎಂದು ಭಯ ಹುಟ್ಟಿಸಿದ್ದ.

ಬಳಿಕ ‘ನಿಮ್ಮ ಮೊಬೈಲ್‌ಗೆ ಬರುವ ಒಟಿಪಿ ನಂಬರ್ ತಿಳಿಸಿದರೆ ಸಾಕು, ಆನ್‌ಲೈನ್‌ನಲ್ಲಿ ಅಪ್‌ಡೇಟ್ ಮಾಡುತ್ತೇನೆ’ ಎಂದು ಭರವಸೆ ನೀಡಿದ್ದ. ಅದನ್ನು ನಂಬಿದ ಕೋಮತಿ, ಒಟಿಪಿ ಹೇಳಿದ್ದರು. ಸ್ವಲ್ಪ ಹೊತ್ತಿಗೆ ಕೋಮತಿ ಅವರ ಬ್ಯಾಂಕ್ ಖಾತೆಯಿಂದ 53,900 ರೂ. ಕಡಿತವಾಗಿತ್ತು. ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಕೋಮತಿ, ಸೈಬರ್ ಕ್ರೈಂ ಕಂಟ್ರೋಲ್ ರೂಮ್ 1930ಗೆ ಕರೆ ಮಾಡಿ ದೂರು ಸಲ್ಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.