ನ್ಯೂಸ್

ಕಾವೇರಿ 2.0ಗೆ ಕನ್ನ, ಇಡಿ ಬಲೆಗೆ ಆರೋಪಿ

ಬೆಂಗಳೂರು: ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ 2.0 ತಂತ್ರಾಂಶದಲ್ಲಿ ಅನಿವಾಸಿ ಭಾರತೀಯರ ದಾಖಲೆ ಕದ್ದು ಆದಾಯ ತೆರಿಗೆ ಹಿಂಪಡೆಯುತ್ತಿದ್ದ ಕುಖ್ಯಾತ ವಂಚಕನನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿದೆ.

ನಗರದ ಬಿ.ಆರ್. ದಿಲೀಪ್ ಅಲಿಯಾಸ್ ದಿಲೀಪ್ ರಾಜೇಗೌಡ ಬಂಧಿತ. ಅಕ್ರಮ ಹಣಕಾಸು ವಹಿವಾಟು ಆರೋಪದಡಿ ಬಂಧಿಸಿರುವ ಇ.ಡಿ ಅಧಿಕಾರಿಗಳು, ಕೋರ್ಟ್‌ಗೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ಇದನ್ನು ಪುರಸ್ಕರಿಸಿದ ಸಿಸಿಎಚ್-1 ಕೋರ್ಟ್, 7 ದಿನ ಇ.ಡಿ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದೆ.

ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ 2.0 ತಂತ್ರಾಂಶ ಮತ್ತು ಹರಿಯಾಣದ ಜಮಾಬಂದಿ ಸ್‌ಟಾವೇರ್‌ನಲ್ಲಿ ದಾಖಲೆಗಳಿಗೆ ದಿಲೀಪ್ ಕನ್ನ ಹಾಕುತ್ತಿದ್ದ. ಅನಿವಾಸಿ ಭಾರತೀಯರು ಕರ್ನಾಟಕ ಮತ್ತು ಹರಿಯಾಣದಲ್ಲಿನ ಆಸ್ತಿ ಮಾರಾಟಕ್ಕಾಗಿ ಟಿಡಿಆರ್ ಸಲ್ಲಿಸುತ್ತಿದ್ದರು. ಇಂತಹ ದಸ್ತಾವೇಜುಗಳನ್ನೇ ಟಾರ್ಗೆಟ್ ಮಾಡಿ ಕಳವು ಮಾಡುತ್ತಿದ್ದ. ಅದರಲ್ಲಿನ ಆಧಾರ್, ಪಾನ್ ಕಾರ್ಡ್ ನಕಲು ಪ್ರತಿ ಬಳಸಿಕೊಂಡು ಕೆವೈಸಿ ಪಡೆಯದೆ ಬ್ಯಾಂಕ್‌ನಲ್ಲಿ ಖಾತೆ ತೆರೆಯುತ್ತಿದ್ದ. ಆನಂತರ ಆದಾಯ ತೆರಿಗೆ ಇಲಾಖೆಯ ಇ-ೈಲಿಂಗ್ ಪೋರ್ಟಲ್ ಪ್ರವೇಶ ಮಾಡಿ ಅದಕ್ಕೆ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿ ತೆರಿಗೆ ಹೊಣೆಗಾರಿಕೆ ಕಡಿಮೆ ಮಾಡಲು ಮತ್ತು ಪರಿಷ್ಕರಿಣೆ, ಮರುಪಾವತಿಗೆ ಅರ್ಜಿ ಸಲ್ಲಿಸುತ್ತಿದ್ದ. ಆದಾಯ ತರಿಗೆ ಇಲಾಖೆ ಅಧಿಕಾರಿಗಳು ತೆರಿಗೆ ಮರುಪಾವತಿ ಮಾಡಿದಾಗ ದಿಲೀಪ್ ತೆರೆದಿದ್ದ ಬ್ಯಾಂಕ್ ಖಾತೆಗೆ ಜಮೆ ಆಗುತ್ತಿತ್ತು. ಈ ಖಾತೆಗಳು ಈತನ ನಿಯಂತ್ರಣದಲ್ಲಿದ್ದ ಕಾರಣ ಹಣ ವಿತ್ ಡ್ರಾ ಮಾಡಿಕೊಳ್ಳುತ್ತಿದ್ದ. ಇದೇ ರೀತಿಯಾಗಿ 10 ಕೋಟಿ ರೂ. ವಂಚನೆ ಮಾಡಿದ್ದನು. ಇದನ್ನು ಚಿನ್ನ, ಆಭರಣ, ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.

ಇದಲ್ಲದೆ, ವಿವಿಧ ಹೆಸರಿನಲ್ಲಿ ಆಧಾರ್, ಪಾನ್ ಕಾರ್ಡ್ ಮಾಡಿಸಿಕೊಂಡು ಹಲವು ಬ್ಯಾಂಕ್‌ಗಳಲ್ಲಿ ಖಾತೆ ತೆರೆದು ಅವರಿಂದ ವೈಯಕ್ತಿಕ ಸಾಲ, ವಾಹನ ಸಾಲ ಪಡೆದು ವಂಚನೆ ಮಾಡಿದ್ದಾನೆ. ಎಲ್ಲ ಕಡೆ ನಕಲಿ ಸಹಿ ಮಾಡಿರುವುದು ಬೆಳಕಿಗೆ ಬಂದಿದೆ.

ಮೂರು ಹೆಸರು, ಆಧಾರ್-ಪಾನ್

ದಿಲೀಪ್ ಬಿ.ಆರ್. ಅಲಿಯಾಸ್ ದಿಲೀಪ್ ರಾಜೇಗೌಡ, ದಿಲೀಪ್ ಬಾಲಗಂಚಿ ರಾಜೇಗೌಡ ಎಂದು ಮೂರು ಹೆಸರು ಹೊಂದಿದ್ದ. ಅದೇ ರೀತಿ ಮೂರು ಆಧಾರ್, ಪಾನ್ ಕಾರ್ಡ್ ಮಾಡಿಸಿಕೊಂಡು ಹಲವು ಬ್ಯಾಂಕ್‌ಗಳಲ್ಲಿ ಖಾತೆ ತೆರೆದು ಮೋಸ ಮಾಡಿದ್ದಾನೆ. ಅಕ್ರಮ ಹಣಕಾಸು ವಹಿವಾಟು ನಡೆಸಿದ್ದು, ಆರೋಪಿಯಿಂದ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆರಳಚ್ಚು ಕದ್ದು ಸಹ ವಂಚನೆ

ಈ ಮೊದಲು ಕಾವೇರಿ 2.0 ಸ್‌ಟಾವೇರ್‌ನಲ್ಲಿ ದಸ್ತಾವೇಜುಗಳನ್ನು ನಕಲಿ ಪಡೆದು ಅದರಲ್ಲಿನ ಪಕ್ಷಗಾರರ ಬೆರಳಚ್ಚು ಕದ್ದು ಅದನ್ನು ಬಳಸಿಕೊಂಡು ಎಇಪಿಎಸ್ ಮೂಲಕ ಬ್ಯಾಂಕ್ ಖಾತೆಗೆ ಸೈಬರ್ ಕಳ್ಳರು ವಂಚನೆ ಮಾಡುತ್ತಿದ್ದರು. ಬೆಂಗಳೂರು ನಗರ ಅಲ್ಲದೆ, ರಾಜ್ಯದ ಎಲ್ಲೆಡೆ ವಂಚನೆ ಆಗಿರುವ ಸಂಬಂಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದ್ದವು. ಇದೀಗ ಸುಲಭವಾಗಿ ದಸ್ತಾವೇಜು ನಕಲು ಪ್ರತಿ ಸಿಗದಂತೆ ಸ್‌ಟಾವೇರ್ ಅಪ್‌ಗ್ರೇಡ್ ಮಾಡಲಾಗಿದೆ.