ಬಿಜೆಪಿ ವಿರುದ್ಧ ಹಿಮಾಚಲ ಸಚಿವ ಜಗತ್ ಸಿಂಗ್ ನೇಗಿ ಗಂಭೀರ ಆರೋಪ.
ಸೋನಿಯಾ ಗಾಂಧಿ ಪುಸ್ತಕದಿಂದ ಗಮನ ಬೇರೆಡೆ ಸೆಳೆಯುವ ಯತ್ನ ಎಂದ ನೇಗಿ
ಕಂಗನಾ ರಣಾವತ್ ಅವರ ಸಾಮಾಜಿಕ ಜಾಲತಾಣದ ಹೇಳಿಕೆಗಳಿಗೆ ಆಕ್ಷೇಪ
Kangana Ranaut FIR: ಸೋನಿಯಾ ಗಾಂಧಿ ಅವರ ಪುಸ್ತಕದಲ್ಲಿನ ವಿಚಾರಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿ, ಕಂಗನಾ ರಣಾವತ್ ಅವರ ವಿವಾದಾತ್ಮಕ ಹೇಳಿಕೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಹಿಮಾಚಲ ಪ್ರದೇಶದ ಕಂದಾಯ ಸಚಿವ ಜಗತ್ ಸಿಂಗ್ ನೇಗಿ ಆರೋಪಿಸಿದ್ದಾರೆ.
ಸೋನಿಯಾ ಗಾಂಧಿ ಕುಟುಂಬದ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ ಹಾಕಿದ ಆರೋಪದಡಿ ಕಂಗನಾ ವಿರುದ್ಧ ಎಫ್ಐಆರ್ ದಾಖಲಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ನೇಗಿ, ಸೋನಿಯಾ ಗಾಂಧಿ ಪುಸ್ತಕದಲ್ಲಿನ ಐತಿಹಾಸಿಕ ವಿಚಾರಗಳಿಗೆ ಉತ್ತರಿಸಲಾಗದೆ ಬಿಜೆಪಿ ಇಂತಹ ವಿವಾದಗಳನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಸೋನಿಯಾ ಗಾಂಧಿ ಅವರನ್ನು 'ನಿಗೂಢ ವಿದೇಶಿ ಮಹಿಳೆ' ಎಂದು ಕರೆದ ಕಂಗನಾ ಹೇಳಿಕೆಯನ್ನು ನೇಗಿ ಖಂಡಿಸಿದ್ದಾರೆ. ಇಂತಹ ಹೇಳಿಕೆಗಳು ಸಭ್ಯತೆಗೆ ವಿರುದ್ಧವಾಗಿವೆ ಎಂದ ಅವರು, ರಾಜಕೀಯ ಸಂಕಷ್ಟ ಎದುರಾದಾಗ ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿ ಇಂತಹ ವಿವಾದಗಳನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. ಕಂಗನಾ ವಿರುದ್ಧದ ಮುಂದಿನ ಕಾನೂನು ಕ್ರಮ ಪೊಲೀಸರ ತನಿಖೆಯ ಬಳಿಕ ನಿರ್ಧಾರವಾಗಲಿದೆ ಎಂದು ತಿಳಿಸಿದ್ದಾರೆ.
ನವೆಂಬರ್ 12ರಂದು ಶಿಮ್ಲಾ ನಿವಾಸಿ ಕ್ಯಾಪ್ಟನ್ ಅತುಲ್ ಶರ್ಮಾ ಅವರು ಹಿಮಾಚಲ ಪ್ರದೇಶದ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದರು. ಇದರ ಆಧಾರದ ಮೇಲೆ ನವೆಂಬರ್ 10ರಂದು ಕಂಗನಾ ಅವರ ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರಕಟವಾಗಿದ್ದ ಪೋಸ್ಟ್ಗಳಿಗೆ ಸಂಬಂಧಿಸಿದಂತೆ ಶಿಮ್ಲಾ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಗಾಂಧಿ ಕುಟುಂಬದ ಹಳೆಯ ವಿಡಿಯೋ ಜತೆ ಕಂಗನಾ ಪ್ರಕಟಿಸಿದ್ದ ಪೋಸ್ಟ್ಗಳಲ್ಲಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಸಂಜಯ್ ಗಾಂಧಿ ಅವರ ಸಾವಿನ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳಿವೆ ಎಂದು ದೂರುದಾರರು ಆರೋಪಿಸಿದ್ದಾರೆ. ಈ ಸಂಬಂಧ ಬಿಎನ್ಎಸ್ (BNS)ನ ಸೆಕ್ಷನ್ 196, 353 ಮತ್ತು 356ರ ಅಡಿಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.