ನವದೆಹಲಿ: ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು, ತಾವು ಪ್ರತಿನಿಧಿಸುವ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಜನರು ತಮ್ಮನ್ನು ಭೇಟಿ ಮಾಡಲು ಬಯಸಿದರೆ, ತಮ್ಮ ಆಧಾರ್ ಕಾರ್ಡ್‌ಗಳನ್ನು ತರಬೇಕು’ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆ ಇದೀಗ ವಿವಾದ ಹುಟ್ಟುಹಾಕಿದೆ.
ಮಂಡಿ ಲೋಕಸಭಾ ಕ್ಷೇತ್ರದ ಜನರು ನನ್ನನ್ನು ಭೇಟಿ ಮಾಡಲು ಬಯಸಿದರೆ, ಅವರು ಆಧಾರ್ ಕಾರ್ಡ್ ತಂದರೆ ಒಳ್ಳೆಯದು ಏಕೆಂದರೆ ಅವರು ಮಂಡಿ ಸಂಸದೀಯ ಕ್ಷೇತ್ರದವರೇ ಅಥವಾ ಬೇರೆ ಜನರಿರಬಹುದಾ ಎಂಬುದು ತಿಳಿಯುತ್ತದೆ ಎಂದು ಕಂಗನಾ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕಂಗನಾ ಅವರು, ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಹಾಗೂ ಹೊರಗಿನವರು ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸ ನಿಯಮ ಜಾರಿಗೊಳಿಸುತ್ತಿರುವುದಾಗಿ ಕಂಗನಾ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಮಂಡಿ ಕ್ಷೇತ್ರದಲ್ಲಿದ್ದರೆ ನಿಯೋಜಿತವಾದ ಸಂವಾದ ಕೇಂದ್ರದಲ್ಲಿ ಸಂದರ್ಶಕರನ್ನ ಭೇಟಿ ಮಾಡುವುದಾಗಿ ತಿಳಿಸಿದ್ದಾರೆ.
ಹಿಮಾಚಲ ಪ್ರದೇಶವು ಪ್ರವಾಸಿಗರನ್ನು ಹೆಚ್ಚು ಮಂದಿಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಹೆಚ್ಚಿನ ಪ್ರವಾಸಿಗರು ಬರುವುದರಿಂದ ಕ್ಷೇತ್ರದ ಜನರಿಗೆ ಅನಾನುಕೂಲ ಆಗಬಹುದು. ಹಾಗಾಗಿ ಕ್ಷೇತ್ರದ ಜನ ಆಧಾರ್ ಕಾರ್ಡ್ ಹೊಂದುವುದು ಕಡ್ಡಾಯವಾಗಿದೆ. ಕ್ಷೇತ್ರಕ್ಕೆ ಸಂಬಂಧಿಸಿದ ನಿಮ್ಮ ಕೆಲಸಗಳನ್ನು ಸಹ ಒಂದು ಪತ್ರದಲ್ಲಿ ಬರೆಯಬೇಕು. ಇದರಿಂದ ಪ್ರತಿಯೊಬ್ಬರ ಮನೆಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವುದು ಸುಲಭವೂ ಆಗುತ್ತದೆ. ಜೊತೆಗೆ ಅನಾನುಕೂಲವಾಗದಂತೆ ಎಚ್ಚರ ವಹಿಸಬಹುದು ಎಂದು ಕಂಗನಾ ಅವರು ಸ್ಪಷ್ಟಪಡಿಸಿದ್ದಾರೆ.
ಕಂಗನಾ ರಣಾವತ್ ವಿರುದ್ಧ ಕಾಂಗ್ರೆಸ್ ವಾಗ್ದಾಳಿ: ಮಂಡಿಯಿಂದ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿಯಾಗಿದ್ದ ವಿಕ್ರಮಾದಿತ್ಯ ಸಿಂಗ್ ಜನಪ್ರತಿಸ್ಪರ್ಧಿಯೊಬ್ಬರು ತಮ್ಮ ಕ್ಷೇತ್ರದ ಜನರಿಗೆ ಬೇಕಾದರೆ ಬರಲಿ ಎಂದು ಹೇಳುವುದು ಉತ್ತಮ ನಡುವಳಿಕೆಯಲ್ಲ ಎಂದು ಸಂಸದೆ ಕಂಗನಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ನಾವು ಜನಪ್ರತಿನಿಧಿಗಳು. ಹಾಗಾಗಿ ರಾಜ್ಯದ ಪ್ರತಿಯೊಂದು ವರ್ಗದ ಜನರನ್ನು ಭೇಟಿ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಅದು ಸಣ್ಣ ಕೆಲಸವಾಗಲಿ, ದೊಡ್ಡ ಕೆಲಸವಾಗಲಿ, ನೀತಿ ವಿಷಯವಾಗಲಿ ಅಥವಾ ವೈಯಕ್ತಿಕ ಕೆಲಸವಾಗಲಿ, ಯಾವುದೇ ಗುರುತಿನ ಚೀಟಿ ಅಗತ್ಯವಿಲ್ಲ. ಒಬ್ಬ ವ್ಯಕ್ತಿ ಸಾರ್ವಜನಿಕ ಪ್ರತಿನಿಧಿಯ ಬಳಿಗೆ ಬರುತ್ತಿದ್ದಾರೆ, ಅವರು ಯಾವುದೋ ಕೆಲಸಕ್ಕಾಗಿ ಬರುತ್ತಿದ್ದಾರೆ" ಎಂದು ಹಾಲಿ ರಾಜ್ಯ ಲೋಕೋಪಯೋಗಿ ಸಚಿವರೂ ಆಗಿರುವ ವಿಕ್ರಮಾದಿತ್ಯ ಸಿಂಗ್ ವಾಗ್ದಾಳಿ ನಡೆಸಿದರು.