ಕಂಗನಾ 
ನ್ಯೂಸ್

'ದೇಶಕ್ಕೆ ರಾಷ್ಟ್ರಪಿತ ಯಾರೂ ಇಲ್ಲ': ಟೀಕೆಗೆ ಗುರಿಯಾದ ಕಂಗನಾ ಪೋಸ್ಟ್ | Kangana

ನವದೆಹಲಿ: ಬಾಲಿವುಡ್ ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್(Kangana) ಹೇಳಿಕೆಗಳು ವಿವಾದಕ್ಕೀಡಾಗುತ್ತಿರುವುದು ತಿಳಿದ ಸಂಗತಿಯೇ. ಅವರು ಗಾಂಧಿ ಜಯಂತಿಯಂದು ಮಹಾತ್ಮ ಗಾಂಧಿಯನ್ನು ಕುರಿತು ಇನ್​ಸ್ಟಾಗ್ರಾಮ್​ನಲ್ಲಿ ಮಾಡಿರುವ ಪೋಸ್ಟ್ ಮತ್ತೊಮ್ಮೆ ವಿವಾದ ಹುಟ್ಟುಹಾಕಿದೆ.

'ದೇಶಕ್ಕೆ ಯಾರೂ ಪಿತಾಮಹರಿಲ್ಲ, ಗಂಡು ಮಕ್ಕಳಿದ್ದಾರೆ. ಅಂತಹ ಮಕ್ಕಳನ್ನು ಪಡೆದ ಭಾರತಮಾತೆ (ಲಾಲ್ ಬಹದ್ದೂರ್ ಶಾಸ್ತ್ರಿ) ಅದೃಷ್ಟಶಾಲಿ' ಎಂದು ಪ್ರತಿಕ್ರಿಯಿಸಿದ್ದರು. ಇದಕ್ಕೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಮಹಾತ್ಮ ಗಾಂಧಿಯವರನ್ನು ಕೀಳಾಗಿ ಕಾಣಲಾಗುತ್ತಿದೆ ಎಂದು ಆರೋಪಿಸಿತ್ತು.

ಇದರ ನಡುವೆ ಮತ್ತೊಂದು ಪೋಸ್ಟ್‌ನಲ್ಲಿ, ಕಂಗನಾ(Kangana) ದೇಶದಲ್ಲಿ ಗಾಂಧೀಜಿಯವರ ಸ್ವಚ್ಛತೆಯ ಪರಂಪರೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮುನ್ನಡೆಸುತ್ತಿದ್ದಾರೆ ಎಂದು ಶ್ಲಾಘಿಸಿದ್ದಾರೆ.

ಇದಕ್ಕೆ ಕಾಂಗ್ರೆಸ್ ನಾಯಕಿ ಸುಪ್ರಿಯಾ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೋಡ್ಸೆ ಆರಾಧಕರು ಬಾಪು ಮತ್ತು ಶಾಸ್ತ್ರಿಗಳ ನಡುವೆ ವ್ಯತ್ಯಾಸ ಮಾಡುತ್ತಾರೆ. ನರೇಂದ್ರ ಮೋದಿ ಅವರು ತಮ್ಮ ಪಕ್ಷದ ಹೊಸ ಗೋಡ್ಸೆ ಭಕ್ತನನ್ನು ಮನಃಪೂರ್ವಕವಾಗಿ ಕ್ಷಮಿಸುವರೇ? ರಾಷ್ಟ್ರದ ಪಿತಾಮಹರಿದ್ದಾರೆ, ಪುತ್ರರಿದ್ದಾರೆ. ಹುತಾತ್ಮರಿದ್ದಾರೆ. ಎಲ್ಲರೂ ಗೌರವಕ್ಕೆ ಅರ್ಹರು' ಎಂದಿದ್ದಾರೆ.

ಬಿಜೆಪಿಯವರೂ ಟೀಕೆ: (Kangana)

ಪಂಜಾಬ್‌ನ ಹಿರಿಯ ಬಿಜೆಪಿ ನಾಯಕ ಮನೋರಂಜನ್ ಕಾಲಿಯಾ ಕೂಡ ಕಂಗನಾ ಪೋಸ್ಟ್ ಅನ್ನು ಕಟುವಾಗಿ ಟೀಕಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ಮಹಾತ್ಮ ಗಾಂಧಿಯವರ 155 ನೇ ಜನ್ಮದಿನದಂದು ಕಂಗನಾ ಅವರ ಕಾಮೆಂಟ್‌ಗಳನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ. ಕಂಗನಾ ತಮ್ಮ ರಾಜಕೀಯ ಜೀವನದಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. 'ರಾಜಕೀಯ ಆಕೆಯ ಕ್ಷೇತ್ರವಲ್ಲ, ರಾಜಕೀಯ ಗಂಭೀರ ವಿಷಯ, ಮಾತನಾಡುವ ಮುನ್ನ ಯೋಚಿಸಬೇಕು. ಆಕೆಯ ವಿವಾದಾತ್ಮಕ ಹೇಳಿಕೆಗಳು ಪಕ್ಷಕ್ಕೆ ತೊಂದರೆ ನೀಡುತ್ತಿವೆ' ಎಂದು ಹೇಳಿದ್ದಾರೆ.