ನ್ಯೂಸ್

ದುರಸ್ತಿಗೆ ಕಾದಿದೆ ಕಣ್ವ ನದಿ ಸೇತುವೆ: ಕುಸಿದ ತಡೆಗೋಡೆ, ಕಂದಕ ನಿರ್ಮಾಣ ವಾಹನ ಸವಾರರಿಗೆ ಆತಂಕ

Ramanagara

ಚನ್ನಪಟ್ಟಣ : ತಿಟ್ಟಮಾರನಹಳ್ಳಿ ಹಾಗೂ ಕೋಟಮಾರನಹಳ್ಳಿ ಮಧ್ಯೆ ಕಣ್ವ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯ ಕೆಲವು ಭಾಗಗಳು ಶಿಥಿಲಗೊಂಡಿವೆ.

ಸೇತುವೆಯ ಒಂದು ಭಾಗದಲ್ಲಿ ಆಳವಾದ ಕಂದಕ ನಿರ್ಮಾಣಗೊಂಡಿದ್ದು, ಇನ್ನೊಂದು ಭಾಗದಲ್ಲಿ ತಡೆಗೋಡೆ ಸಂಪೂರ್ಣ ಕುಸಿದಿದೆ. ಸೇತುವೆಯ ಕೆಲ ಭಾಗಗಳು ಬಿರುಕು ಬಿಟ್ಟಿರುವುದು ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರ ಆತಂಕಕ್ಕೆ ಕಾರಣವಾಗಿದೆ.

ಚನ್ನಪಟ್ಟಣದಿಂದ ನಿಡಸಾಲೆ, ಹುಲಿಯೂರು ದುರ್ಗ ಹಾಗೂ ತುಮಕೂರು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿರುವ ಈ ಸೇತುವೆಯನ್ನು ಕೋಟಮಾರನಹಳ್ಳಿ, ಮೈಲಾನಾಯಕ್ಕನಹಳ್ಳಿ, ಹೊಸಹಳ್ಳಿ, ಹರೂರು, ಹನುಮಾಪುರದೊಡ್ಡಿ, ತೊರೆಹೊಸೂರು, ಕನ್ನಸಂದ್ರ, ಮೋಗೇನಹಳ್ಳಿ, ಬೇವೂರು ಸೇರಿ 20ಕ್ಕೂ ಹೆಚ್ಚಿನ ಗ್ರಾಮಗಳ ಜನತೆ ಪ್ರತಿನಿತ್ಯ ಬಳಸುತ್ತಾರೆ. ಸೇತುವೆ ಶಿಥಿಲಗೊಂಡಿರುವುದು ಅಪಾಯಕ್ಕೆ ಆಹ್ವಾನ ನೀಡುವಂತಿದೆ.

ಎಚ್ಚರ ತಪ್ಪಿದರೆ ಅನಾಹುತ ನಿಶ್ಚಿತ: ಸೇತುವೆಯ ಕೊನೆಯ ಭಾಗದಲ್ಲಿ ಸಣ್ಣ ಕಂದಕ ನಿರ್ಮಾಣವಾಗಿದ್ದು, ರಸ್ತೆ ಕುಸಿದಿದೆ. ಈ ವೇಳೆ ಸವಾರರು ಎಚ್ಚರ ತಪ್ಪಿದರೂ ಅಪಾಯಕ್ಕೆ ಸಿಲುಕಬೇಕಾಗಿದೆ. ಈ ಕಂದಕದ ಬಗ್ಗೆ ಅರಿವಿಲ್ಲದ ಅನೇಕ ಬೈಕ್ ಸವಾರರು ಈಗಾಗಲೇ ಬಿದ್ದು ಪೆಟ್ಟು ತಿಂದಿದ್ದಾರೆ. ರಾತ್ರಿ ಸಮಯದಲ್ಲಿ ಕಂದಕ ಗೋಚರಿಸುವುದಿಲ್ಲ. ಕಂದಕದ ಸುತ್ತ ಹುಲ್ಲು ಬೆಳೆದಿರುವ ಕಾರಣ ಗುಂಡಿ ಗುರುತಿಸುವುದು ಕಷ್ಟಸಾಧ್ಯ. ಇದರೊಂದಿಗೆ ಸೇತುವೆಯ ಇನ್ನೊಂದು ಭಾಗದಲ್ಲಿ ತಡೆಗೋಡೆಯೂ ವಾಲಿದ್ದು, ಬೀಳುವಂತಿದೆ.

1980ರಲ್ಲಿ ಸೇತುವೆ ನಿರ್ಮಾಣವಾಗಿದ್ದು, ಕಂದಕ ಮುಚ್ಚುವುದು, ವಾಲಿರುವ ತಡೆಗೋಡೆ ಸರಿಪಡಿಸುವುದು ಸೇರಿ ಸಣ್ಣ-ಪುಟ್ಟ ದುರಸ್ತಿ ಕಾಮಗಾರಿಗಳು ಆಗಬೇಕಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇದರತ್ತ ಗಮನಹರಿಸಲಿ ಎಂದು ಈ ಭಾಗದ ವಾಹನ ಸವಾರರು ಒತ್ತಾಯಿಸಿದ್ದಾರೆ.

ಸೇತುವೆಯ ಕೆಲಭಾಗ ದುಸ್ಥಿತಿಯಲ್ಲಿದೆ. ಒಂದು ಭಾಗದಲ್ಲಿ ಕುಸಿತ ಉಂಟಾಗಿ ಕಂದಕ ನಿರ್ಮಾಣವಾಗಿದೆ. ಮತ್ತೊಂದೆಡೆ ತಡೆಗೋಡೆ ಉರುಳಿದೆ. ಸೇತುವೆ ಪೂರ್ತಿ ಗಿಡ-ಗಂಟಿಗಳು ಬೆಳೆದುಕೊಂಡಿವೆ. ಸಾವಿರಾರು ಮಂದಿ ಸಂಚರಿಸುವ ಈ ಸೇತುವೆಯನ್ನು ಕೂಡಲೇ ದುರಸ್ತಿ ಮಾಡಬೇಕು. ಟಿ.ಎಚ್. ದಿಲೀಪ್‌ಕುಮಾರ್ ತಿಟ್ಟಮಾರನಹಳ್ಳಿ ಸೇತುವೆ ಸಮಸ್ಯೆ ಗಮನಕ್ಕೆ ಬಂದಿಲ್ಲ. ಮೇಲಿನ ಅಧಿಕಾರಿಗಳ ಗಮನಕ್ಕೆ ತಂದು ಕೂಡಲೇ ಸ್ಥಳ ಪರಿಶೀಲಿಸಿ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ನಂಜುಂಡಸ್ವಾಮಿ ಇಂಜಿನಿಯರ್, ಲೋಕೋಪಯೋಗಿ, ಕಸಬಾ ವಿಭಾಗ