ಸಿಂಧನೂರು: ಸಮಾಜಕ್ಕೆ ಮಠಗಳ ಕೊಡುಗೆ ಅಪಾರ. ಅದರಲ್ಲಿ ಕನಕಗುರುಪೀಠ ಹಾಗೂ ಹಾಲುಮತ ಸಮಾಜದ ಮಠಗಳು ಜನಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದು ಮೇಘಾಲಯ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಹೇಳಿದರು.
ನಗರದಲ್ಲಿ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ನಿವಾಸಕ್ಕೆ ಶನಿವಾರ ಸಂಜೆ ಭೇಟಿ ನೀಡಿ ನಂತರ ಸುದ್ದಿಗಾರೊಂದಿಗೆ ಮಾತನಾಡಿದರು. ಮೈಲಾರಲಿಂಗದ ಕಾರಣಿಕವನ್ನು ದೇಶವೇ ಒಪ್ಪುತ್ತದೆ. ಅಮೋಘ ಸಿದ್ಧೇಶ್ವರ ದೈವ ಪುರುಷರು. ಸಮಾಜಕ್ಕಾಗಿ ಮಠಗಳ ಮೂಲಕ ಉತ್ತಮ ಕಾರ್ಯ ಮಾಡಲಾಗುತ್ತದೆ. ಸಾಂವಿಧಾನಿಕ ಹುದ್ದೆಯಲ್ಲಿ ಇರುವುದರಿಂದ ಬೇರಾವ ವಿಚಾರದ ಕುರಿತು ಮಾತನಾಡಲ್ಲ ಎಂದ ಅವರು, ಶಾಸಕರು ಹಾಗೂ ರಾಜ್ಯಪಾಲರ ಕರ್ತವ್ಯ ಒಂದೇ ಆಗಿದೆ ಎಂದರು.
ಮೇಘಾಲಯದ ಜನರು ಪ್ರತಿ ಗಿಡವನ್ನು ಅತ್ಯಂತ ಪೂಜನೀಯ ಭಾವದಿಂದ ನೋಡುತ್ತಾರೆ. ಅಲ್ಲದೆ ಗಿಡಮರಗಳನ್ನು ಭಕ್ತಿಯಿಂದ ಪೂಜಿಸಿ ಪರಿಸರವನ್ನು ಕಾಪಾಡುತ್ತಿದ್ದಾರೆ ಎಂದರು. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಶಾಸಕರಾದ ದೊಡ್ಡನಗೌಡ ಪಾಟೀಲ್, ಮಾನಪ್ಪ ವಜ್ಜಲ್, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಮುಖಂಡ ಕೆ.ಕರಿಯಪ್ಪ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ ಇದ್ದರು.